ಕರ್ನಾಟಕ

karnataka

ETV Bharat / state

ಇನ್ನೂ ವೇಗ ಪಡೆಯದ ಡಬಲ್‌ ಇಂಜಿನ್ ಸರ್ಕಾರ: 30ಕ್ಕೂ ಅಧಿಕ ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಗೊಳಿಸದ ಕೇಂದ್ರ! - ಈಟಿವಿ ಭಾರತ್​ ಕನ್ನಡ

ಆರ್ಥಿಕ ವರ್ಷದ ಎಂಟು ತಿಂಗಳು ಕಳೆದರೂ ರಾಜ್ಯದ ವಿವಿಧ ಕೇಂದ್ರ ಪುರಸ್ಕೃತ ಯೋಜನೆಯ ಪ್ರಗತಿ ಇನ್ನೂ ಟೇಕ್ ಆಫ್ ಆಗಿಲ್ಲ.

ಇನ್ನೂ ವೇಗ ಪಡೆಯದ ಡಬಲ್‌ ಇಂಜಿನ್ ಸರ್ಕಾರ: 30ಕ್ಕೂ ಅಧಿಕ ಯೋಜನೆಗಳಿಗೆ ಬಿಡಿಗಾಸೂ ಬಿಡುಗಡೆಗೊಳಿಸದ ಕೇಂದ್ರ!
center-has-not-released-the-money-for-more-than-30-projects-in-karnataka

By

Published : Dec 16, 2022, 12:22 PM IST

ಬೆಂಗಳೂರು: ಆರ್ಥಿಕ ವರ್ಷದ ಮುಕ್ಕಾಲು ಭಾಗ ಕಳೆದರೂ ರಾಜ್ಯದಲ್ಲಿನ ಡಬಲ್ ಇಂಜಿನ್ ಸರ್ಕಾರ ಇನ್ನೂ ವೇಗ ಪಡೆದಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ಕಾರಣ 2022-23 ಸಾಲಿನ 8 ತಿಂಗಳು ಕಳೆದರೂ ಕೇಂದ್ರ ಪುರಸ್ಕೃತ ಬಹುತೇಕ ಯೋಜನೆಗಳು ಶೂನ್ಯ ಪ್ರಗತಿ‌ ಕಂಡಿದ್ದು, ಹಲವು ಯೋಜನೆಗಳಿಗೆ ಕೇಂದ್ರ ಸರ್ಕಾರ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ.

ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಬಿಜೆಪಿ ಸರ್ಕಾರ ಪದೇ ಪದೆ ಹೇಳುತ್ತಲೇ ಇದೆ. ಆರ್ಥಿಕ ವರ್ಷದ ಎಂಟು ತಿಂಗಳು ಕಳೆದರೂ ರಾಜ್ಯದ ವಿವಿಧ ಕೇಂದ್ರದ ಯೋಜನೆಯ ಪ್ರಗತಿ ಇನ್ನೂ ಟೇಕ್ ಆಫ್ ಆಗಿಲ್ಲ. ರಾಜ್ಯದಲ್ಲಿ ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳು ಜಾರಿಯಲ್ಲಿವೆ. ಸುಮಾರು 20 ಇಲಾಖೆಗಳಲ್ಲಿ ವಿವಿಧ ಕೇಂದ್ರದ ಯೋಜನೆಗಳು ಜಾರಿಯಲ್ಲಿವೆ. ಅಂಕಿ ಅಂಶ ನೋಡಿದರೆ ಡಬಲ್ ಇಂಜಿನ್ ಸರ್ಕಾರ ವೇಗ ಕಳೆದುಕೊಂಡಿರುವುದು ಗೋಚರಿಸುತ್ತದೆ.

8 ತಿಂಗಳಲ್ಲಿ ಪ್ರಗತಿ ಕಂಡಿದ್ದು ಕೇವಲ ಶೇ 36.40ರಷ್ಟು:2022-23ನೇ ಸಾಲಿನ ಎಂಟು ತಿಂಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಕೇವಲ ಶೇ 36.40ರಷ್ಟು ಆಗಿದೆ. ರಾಜ್ಯದಲ್ಲಿ ಸುಮಾರು 20 ವಿವಿಧ ಇಲಾಖೆಗಳಡಿ ಕೇಂದ್ರ ಪುರಸ್ಕೃತ ಯೋಜನೆಗಳು ಅನುಷ್ಠಾನಗೊಳ್ಳುತ್ತಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರ ಈವರೆಗೆ 24,452.58 ಕೋಟಿ ರೂ. ಅನುದಾನ ಹಂಚಿಕೆ ಮಾಡಿದೆ. ರಾಜ್ಯ ಸರ್ಕಾರ ತನ್ನ ಪಾಲಿನಲ್ಲಿ 17,198 ಕೋಟಿ ರೂ. ಹಂಚಿಕೆ ಮಾಡಿದೆ. ಕಳೆದ 8 ತಿಂಗಳಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳಿಗೆ 7,140.31 ಕೋಟಿ ರೂ. ಕೇಂದ್ರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ 6,411.96. ಕೋಟಿ ರೂ.‌ಬಿಡುಗಡೆ ಮಾಡಿದೆ. ಆರಂಭಿಕ ಶಿಲ್ಕು ಸೇರಿ ಒಟ್ಟು ಲಭ್ಯ ಅನುದಾನ 22,594 ಕೋಟಿ ರೂ. ಆಗಿದೆ.

ಈವರೆಗೆ ಕೇಂದ್ರ ಪುರಸ್ಕೃತ ಯೋಜನೆಗೆ ರಾಜ್ಯ ಸರ್ಕಾರ 7,290.69 ಕೋಟಿ ರೂ. ವೆಚ್ಚ ಮಾಡಿದ್ದರೆ, ಕೇಂದ್ರ ಸರ್ಕಾರದ ಅನುದಾನದಲ್ಲಿ 7,869.65 ಕೋಟಿ ರೂ. ವೆಚ್ಚ ಮಾಡಿದೆ. ಒಟ್ಟು 15,160.34 ಕೋಟಿ ರೂ ವೆಚ್ಚ ಮಾಡಲಾಗಿದೆ. ಬಿಡುಗಡೆಯಾದ ಅನುದಾನದ ಮುಂದೆ 67.10% ವೆಚ್ಚ ಮಾಡಲಾಗಿದೆ. ಈ ಮೂಲಕ ಒಟ್ಟು ಹಂಚಿಕೆಯಾದ ಅನುದಾನದಲ್ಲಿ ಬರೇ 36.40% ಮಾತ್ರ ಪ್ರಗತಿ ಕಾಣಲು ಸಾಧ್ಯವಾಗಿದೆ.

30 ಯೋಜನೆಗಳಿಗೆ ಶೂನ್ಯ ಅನುದಾನ ಬಿಡುಗಡೆ:20 ಇಲಾಖೆಗಳಲ್ಲಿನ ಸುಮಾರು 30 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ತನ್ನ ಪಾಲಿನ ಬಿಡಿಗಾಸನ್ನೂ ಬಿಡುಗಡೆ ಮಾಡಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ವಸತಿ ಇಲಾಖೆ, ಕೃಷಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಆಹಾರ ಇಲಾಖೆ, ತೋಟಗಾರಿಕೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಜಲಸಂಪನ್ಮೂಲ ಇಲಾಖೆ, ಅರಣ್ಯ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯಲ್ಲಿನ ಸುಮಾರು 30 ವಿವಿಧ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಅನುದಾನ ಸಿಗದೇ, 30ಕ್ಕೂ ಅಧಿಕ ಯೋಜನೆಗಳು ಶೂನ್ಯ ಪ್ರಗತಿ ಕಂಡಿವೆ.

ಕೇಂದ್ರದ ಬಿಡಿಗಾಸೂ ಇಲ್ಲದ ಯೋಜನೆಗಳಿವು:ಕೃಷಿ ಇಲಾಖೆಯಲ್ಲಿನ 2 ಕೇಂದ್ರ ಪುರಸ್ಕೃತ ಯೋಜನೆಗೆ ಕೇಂದ್ರ ಅನುದಾನ ಬಿಡುಗಡೆ ಮಾಡದೆ ಪ್ರಗತಿ ಶೂನ್ಯವಾಗಿದ್ದರೆ, ಪಶುಸಂಗೋಪನೆ ಇಲಾಖೆಯಡಿ ರಾಷ್ಟ್ರೀಯ ಮೇವು ಅಭಿಯಾನಕ್ಕೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಒಬಿಸಿ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಇನ್ನೂ ಕೇಂದ್ರ ಅನುದಾನ ಬಿಡುಗಡೆ ಮಾಡಿಲ್ಲ. ಕೌಶಲ್ಯಾಭಿವೃದ್ಧಿ ಇಲಾಖೆಯಡಿ 4 ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉಜ್ವಲಾ, ಅಂಗನವಾಡಿ ಕಟ್ಟಡ ಮೇಲ್ದರ್ಜೆಗೇರಿಸುವ ಯೋಜನೆಗಳಿಗೆ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಆಹಾರ ಇಲಾಖೆಯಲ್ಲಿ 2 ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರವಾಗಲಿ ರಾಜ್ಯವಾಗಲಿ ಇನ್ನೂ ಬಿಡಿಗಾಸು ಅನುದಾನ ಬಿಡುಗಡೆ ಮಾಡಿಲ್ಲ.

ಅರಣ್ಯ ಹಾಗೂ ಪರಿಸರ ಇಲಾಖೆಯಲ್ಲಿ 6 ವಿವಿಧ ಯೋಜನೆಗಳು, ಆರೋಗ್ಯ ಇಲಾಖೆಯಲ್ಲಿ 2 ಯೋಜನೆಗಳು, ತೋಟಗಾರಿಕೆ ಇಲಾಖೆಯಲ್ಲಿ 2 ಯೋಜನೆಗಳಾದ ತೆಂಗು ಅಭಿವೃದ್ಧಿ ಕಾರ್ಯಕ್ರಮ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಉನ್ನತ ಶಿಕ್ಷಣ ಇಲಾಖೆಯಲ್ಲಿ 1 ಯೋಜನೆ, ಶಿಕ್ಷಣ ಇಲಾಖೆಯಲ್ಲಿ 1, ವಸತಿ ಇಲಾಖೆಯ ಗ್ರಾಮೀಣ ಪ್ರಧಾನ ಮಂತ್ರಿ ಆವಾಜ್ ಯೋಜನೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 1, ಸಮಾಜ ಕಲ್ಯಾಣ ಇಲಾಖೆಯಲ್ಲಿ 4 ಯೋಜನೆಗಳು, ಸಾರಿಗೆ ಇಲಾಖೆ ಹಾಗೂ ಜಲಸಂಪನ್ಮೂಲ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಈವರೆಗೂ ಬಿಡಿಗಾಸು ಬಿಡುಗಡೆ ಮಾಡದೇ ಪ್ರಗತಿ ಶೂನ್ಯವಾಗಿದೆ.

ಇದನ್ನೂ ಓದಿ: ಯಡಿಯೂರಪ್ಪ- ಬೊಮ್ಮಾಯಿ ಸಂಬಂಧ ತಂದೆ - ಮಗನಂತಿದೆ: ಕಾಂಗ್ರೆಸ್​ಗೆ ಟಾಂಗ್​ ಕೊಟ್ಟ ಸಚಿವ ಸುಧಾಕರ್

ABOUT THE AUTHOR

...view details