ಬೆಂಗಳೂರು: ಜಿಎಸ್ಟಿಗೆ 4 ವರ್ಷವಾಗಿದ್ದಕ್ಕೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ತೆರಿಗೆ ಮೇಲಿದ್ದ ರಾಜ್ಯಗಳ ಹಕ್ಕು, ಸ್ವಾತಂತ್ರ್ಯ ಕಸಿದು, ಹೊಟ್ಟೆ ತುಂಬಿಸಿಕೊಂಡಿದ್ದಕ್ಕೆ ಕೇಂದ್ರ ಸಂಭ್ರಮಿಸಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ರಾಜ್ಯಕ್ಕೆ 9 ಸಾವಿರ ಕೋಟಿಯಷ್ಟು ಜಿಎಸ್‌ಟಿ ಪರಿಹಾರ ಬರಬೇಕು. ಈ ಸಂಭ್ರಮದ ವೇಳೆಯಲ್ಲೇ ಪರಿಹಾರ ಬಿಡುಗಡೆ ಆಗಿದ್ದರೆ ಕರ್ನಾಟಕವೂ ಸಂಭ್ರಮಿಸುತ್ತಿತ್ತು. ಕೋವಿಡ್ ಕಾಲದಲ್ಲಿ ಆದಾಯವಿಲ್ಲದೇ ನಲುಗಿರುವ ರಾಜ್ಯಕ್ಕೆ ಪರಿಹಾರದ ಸಿಕ್ಕಿದ್ದಿದ್ದರೆ ಅನುಕೂಲವಾಗುತ್ತಿತ್ತು. ಆದರೆ, ಪರಿಹಾರ ನೀಡದ ಕೇಂದ್ರ ರಾಜ್ಯಗಳ ನೋವಿನ ಮೇಲೆ ಸಂಭ್ರಮಿಸುತ್ತಿದೆ ಎಂದು ಟೀಕಿಸಿದ್ದಾರೆ.
ಪರಿಹಾರಕ್ಕಾಗಿ ಬೇಡುವಂತಾಗಿದೆ:ರಾಜ್ಯಗಳ ಅದಾಯವನ್ನು ಕೇಂದ್ರಕ್ಕೆ ತಿರುಗಿಸಿಕೊಳ್ಳುವುದು, ಅನುದಾನಕ್ಕಾಗಿ ರಾಜ್ಯಗಳು ಕೇಂದ್ರದ ಮುಂದೆ ಗುಲಾಮರಂತೆ ನಿಲ್ಲುವಂತೆ ಮಾಡುವುದು ಜಿಎಸ್ಟಿಯ ಉದ್ದೇಶ. ಇಂಥ ಗುಲಾಮಗಿರಿಯನ್ನು ಕಾಂಗ್ರೆಸ್ ರೂಪಿಸಿತು, ಬಿಜೆಪಿ ಜಾರಿಗೆ ತಂದಿತು. ಈಗ ರಾಜ್ಯಗಳು ಪರಿಹಾರಕ್ಕಾಗಿ ಬೇಡುವಂತಾಗಿದೆ. ಪೆಟ್ರೋಲಿಯಂ ಅನ್ನು ಜಿಎಸ್ಟಿಗೆ ಸೇರಿಸದಂತೆ ಹೋರಾಡುವಂತಾಗಿದೆ ಎಂದು ಹೇಳಿದ್ದಾರೆ.