ಬೆಂಗಳೂರು:ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿದ ರಾಜಕೀಯ, ಸಿನಿಮಾ ರಂಗದ ಗಣ್ಯರು ನಟ ಸಂಚಾರಿ ವಿಜಯ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.ನಟರಾದ ಶಿವರಾಜ್‌ಕುಮಾರ್, ಧನಂಜಯ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಟಿಯರಾದ ಪಾರೂಲ್ ಯಾದವ್, ರೂಪಿಕಾ, ನಿರ್ದೇಶಕ ಪನ್ನಗ ನಾಗಾಭರಣ, ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಅಗಲಿದ ನಟನಿಗೆ ಅಂತಿಮ ನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಿವರಾಜ್ ಕುಮಾರ್, ನನಗೆ ಮಾತುಗಳು ಬರ್ತಿಲ್ಲ. ವಿಜಯ್ ಅಗಲಿರುವುದನ್ನು ಅರಗಿಸಿಕೊಳ್ಳಲು ಕಷ್ಟವಾಗ್ತಿದೆ. ಸಂಚಾರಿ ವಿಜಯ್ ಜೊತೆ ನಾನು ಚಿತ್ರ ಮಾಡಿದ್ದೆ. ಅವರ 'ನಾನು ಅವನಲ್ಲ, ಅವಳು' ಚಿತ್ರ ನೋಡಿದಾಗ ತುಂಬಾ ಖುಷಿ ಆಗಿತ್ತು. ಈಗ ಅವರಿಲ್ಲ ಎಂಬುವುದನ್ನು ಕೇಳಲು ನೋವಾಗ್ತಿದೆ. ವಿಜಯ್ಗೆ ಸಹಾಯ ಮಾಡುವ ಮನೋಭಾವ ಇತ್ತು. ಹಾಗಾಗಿ ತನ್ನ ಅಂಗಾಗ ದಾನ ಮಾಡಿದ್ದಾನೆ. ಹೆಲ್ಮೆಟ್ ಹಾಕಿದ್ದರೆ ವಿಜಯ್ ಅವರ ಜೀವ ಉಳಿಯುತ್ತಿತ್ತು. ಬೈಕ್ನಲ್ಲಿ ಸಂಚರಿಸುವಾಗ ಎಲ್ಲರೂ ಹೆಲ್ಮೆಟ್ ಧರಿಸಿ ಎಂದು ಮನವಿ ಮಾಡಿದರು.
ಡಾಲಿ ಧನಂಜಯ್:ವಿಜಯ್ ತುಂಬಾ ಚಿಕ್ಕವರು, ಒಳ್ಳೆಯ ವ್ಯಕ್ತಿಯಾಗಿದ್ದರು. ತುಂಬಾ ಚೆನ್ನಾಗಿ ಎಲ್ಲದಕ್ಕೂ ಸ್ಪಂದಿಸುತ್ತಿದ್ದ ಜೀವ, ದುರಂತ ಅಂತ್ಯ ಕಂಡಿದೆ. ತುಂಬಾ ಒಳ್ಳೆಯ ದಿನಗಳನ್ನು ನಾವು ಅವರ ಜೊತೆ ಕಳೆದಿದ್ದೇವೆ. ಒಬ್ಬ ಮನುಷ್ಯನಾಗಿ, ಕಲಾವಿದನಾಗಿ ನಮ್ಮ ಜೊತೆ ಅವರು ಇರುತ್ತಾರೆ ಎಂದರು.
ನಟಿ ರೂಪಿಕಾ:ತುಂಬಾ ಬೇಜಾರಾಗುತ್ತಿದೆ. ಯಾವುದೇ ಅಹಂ ಇಲ್ಲದೆ ಇದ್ದ ನಟ, ಅದ್ಭುತವಾದ ವ್ಯಕ್ತಿತ್ವ. ಅವರು ಇಲ್ಲ ಎಂದು ಹೇಳಲು ಬೇಜಾರು ಆಗುತ್ತಿದೆ. ವಿಜಿ ಸಿನಿಮಾ, ಪುಸ್ತಕಗಳ ಬಗ್ಗೆ ಯಾವಾಗ್ಲೂ ಹೇಳ್ತಿದ್ರು. ಸೋಷಿಯಲ್ ವರ್ಕ್ ನಲ್ಲಿ ತೊಡಗಿಸಿಕೊಂಡಿದ್ದರು. ನಾಲ್ಕು ದಿನದ ಹಿಂದೆ ನಾವು ಮಾತನಾಡಿದ್ವಿ. ಇಂತಹ ಪರಿಸ್ತಿತಿಯಲ್ಲೂ ಅಂಗಾಂಗ ದಾನ ಮಾಡಿದ್ದಾರೆ. ಅವರ ಇಡೀ ಕುಟುಂಬಕ್ಕೆ ಧನ್ಯವಾದ ಎಂದು ಹೇಳಿದರು.