ಸಿದ್ದರಾಮಯ್ಯನವರ ಹುಟ್ಟೂರಿನಲ್ಲಿ ಸಂಭ್ರಮ ಮೈಸೂರು:ಕರ್ನಾಟಕದ ಮುಂದಿನ ಮುಖ್ಯಮಂತ್ರಿ ವಿಚಾರ ಬಹುತೇಕ ಕೊನೆಗೊಂಡಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗುವುದು ಭಾಗಶಃ ಖಚಿತಗೊಳ್ಳುತ್ತಿದ್ದಂತೆ ಅವರ ಹುಟ್ಟೂರು ವರುಣ ಕ್ಷೇತ್ರದ ಸಿದ್ದರಾಮನಹುಂಡಿಯಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.
ಅಧಿಕೃತ ಘೋಷಣೆಗೂ ಮುನ್ನ ಸಿದ್ದರಾಮಯ್ಯನವರ ಫ್ಲೆಕ್ಸ್ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆ ಮಾಡತೊಡಗಿದರು. ಇತ್ತ ಮೈಸೂರಿನ ಟಿ ಕೆ.ಲೇಔಟ್ನಲ್ಲಿರುವ ಸಿದ್ದರಾಮಯ್ಯನವರ ಮನೆಗೆ ಅಭಿಮಾನಿಗಳ ದಂಡೇ ಆಗಮಿಸಿದ್ದು, ಮನೆಯ ಸುತ್ತ ಫ್ಲೆಕ್ಸ್ಗಳನ್ನು ಅಳವಡಿಸಿದ್ದಾರೆ. ಮತ್ತೊಂದೆಡೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥಾ ನಡೆಸಿ ಸಂಭ್ರಮಾಚರಣೆಗೆ ಸಾಕ್ಷಿಯಾದರು.
ಬೆಂಗಳೂರಿನಲ್ಲಿರುವ ಸಿದ್ದರಾಮಯ್ಯ ಅವರ ನಿವಾಸದ ಮುಂದೆಯೂ ಜಮಾಯಿಸಿರುವ ನೂರಾರು ಕಾರ್ಯಕರ್ತರು, ಬಡವರ ಬಂಧು ಸಿದ್ದರಾಮಯ್ಯ, ಅನ್ನರಾಮಯ್ಯಗೆ ಜೈ ಎಂದು ಸಿದ್ದರಾಮಯ್ಯ ಪರ ಘೋಷಣೆ ಕೂಗುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮುಂದಿನ ಮುಖ್ಯಮಂತ್ರಿಯ ಹೆಸರನ್ನು ಇಂದೇ ಅಧಿಕೃತವಾಗಿ ಘೋಷಣೆ ಮಾಡಲಿದೆ. ಈ ಮೂಲಕ ಕಳೆದ ಎರಡು ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಹಗ್ಗಜಗ್ಗಾಟಕ್ಕೆ ತೆರೆ ಎಳೆಯಲಿದೆ.
ಇದನ್ನು ಓದಿ: ಚುನಾವಣಾ ರಣಕಣದಲ್ಲಿ ಹಲವರಿಗೆ ಹೀನಾಯ ಸೋಲು: ಠೇವಣಿ ಕಳೆದ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳೆಷ್ಟು?
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 135 ಸ್ಥಾನ ಗೆಲ್ಲುವ ಮೂಲಕ ಜಯಭೇರಿ ಬಾರಿಸಿತ್ತು. ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತಿದ್ದಂತೆ ಮುಖ್ಯಮಂತ್ರಿ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಒಂದು ಬಣ ಸಿದ್ದರಾಮಯ್ಯನವರೇ ಆಗಬೇಕು ಎಂದು ಪಟ್ಟು ಹಿಡಿದಿದ್ದರೆ, ಮತ್ತೊಂದು ಬಣ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿತ್ತು. ಸದ್ಯ ಹೊಸ ಮುಖ್ಯಮಂತ್ರಿ ಆಯ್ಕೆ ಕೊನೆಗೊಂಡಿದೆ.
ಇನ್ನು ಕರ್ನಾಟಕ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಹಾಗೆ ಉಳಿದಿದೆ. ಈ ಬಗ್ಗೆ ಇನ್ನೂ ಹೈಕಮಾಂಡ್ ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೆಹಲಿಯ 10 ಜನಪತ್ನಲ್ಲಿರುವ ನಿವಾಸಕ್ಕೆ ಬೆಳಗ್ಗೆ ಆಗಮಿಸಿದ್ದ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿಗಳ ಜೊತೆ ಅವರು ಮಾತುಕತೆ ನಡೆಸಿದ್ದು, ಅಂತಿಮ ನಿರ್ಧಾರ ಹೇಳುವುದಷ್ಟೇ ಬಾಕಿ ಇದೆ.
ಇದನ್ನು ಓದಿ:ಕಾಂಗ್ರೆಸ್ ಗ್ಯಾರಂಟಿಗಳಿಗೆ ಮಾನದಂಡ ಇರುತ್ತದೆ : ಪರಮೇಶ್ವರ್
ಇಬ್ಬರು ನಾಯಕರ ಅಹವಾಲನ್ನು ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಲಿಸಿದ್ದರು. ಇವತ್ತು ರಾಹುಲ್ ಗಾಂಧಿ ಸಹ ಆಲಿಸಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸುರ್ಜೇವಾಲಾ, ವೇಣುಗೋಪಾಲ್ ಅವರ ಜೊತೆಗೆ ನಡೆಸಿದ ಹಲವು ಸುತ್ತಿನ ಸಭೆಗಳ ಹೊರತಾಗಿಯೂ ಸಿಎಂ ಆಯ್ಕೆ ಕಗ್ಗಂಟು ಬಿಡಿಸಲಾಗಿಲ್ಲ. ಈಗ ಸುರ್ಜೇವಾಲಾ ಕೂಡಾ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಹುತೇಕ ಖಚಿತ.. ಅಭಿಮಾನಿಗಳು, ಬೆಂಬಲಿಗರಿಂದ ಸಂಭ್ರಮಾಚರಣೆ