ಬೆಂಗಳೂರು: ಇಂದು ವೈಕುಂಠ ಏಕಾದಶಿ. ಭಕ್ತರು ಶ್ರೀಮನ್ನಾರಾಯಣನ ಸ್ಮರಣೆಯಲ್ಲಿ ಮಿಂದಿದ್ದಾರೆ. ಬೆಂಗಳೂರಿನ ವೆಂಕಟೇಶ್ವರ ದೇವಾಲಯ ತಳಿರು- ತೋರಣಗಳಿಂದ ಸಿಂಗಾರಗೊಂಡಿದೆ.
ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿ ಪೂಜೆ ವೈಕುಂಠ ಏಕಾದಶಿ ನಿಮಿತ್ತ ಬೆಂಗಳೂರಿನ ಎಲ್ಲ ದೇವಾಲಯಗಳಲ್ಲೂ ವಿಶೇಷ ಪೂಜೆ ಹಾಗೂ ವಿಶೇಷ ದರ್ಶನ ಕಲ್ಪಿಸಲಾಗಿದೆ. ಅಲ್ಲದೇ ಈ ಶುಭ ದಿನದಂದು ವೈಕುಂಠದ ಉತ್ತರದ ಬಾಗಿಲಿನ ಮೂಲಕ ಶ್ರೀಮನ್ನಾರಾಯಣನ ದರ್ಶನ ಮಾಡಿದರೆ ವೈಕುಂಠ ದ್ವಾರ ಪ್ರವೇಶಿಸಿದಂತೆ ಎಂಬ ನಂಬಿಕೆಯಿದೆ ಅದರಂತೆ ದೇವಾಲಯದಲ್ಲಿ ಉತ್ತರ ಬಾಗಿಲನ್ನು ತೆರೆಯಲಾಗಿದೆ.
ಮಧ್ಯರಾತ್ರಿಯಿಂದಲೇ ವೆಂಕಟೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ವೈಕುಂಠ ದ್ವಾರದ ಪೂಜೆ, ಅಷ್ಟೋತ್ತರ ಶತನಾಮಾವಳಿ ಸೇವೆ, ಮಂತ್ರಪುಷ್ಪ ಸೇವೆ, ಅಷ್ಟಾವಧಾನ ಸೇವೆಗಳನ್ನು ಮಾಡಲಾಗುತ್ತಿದೆ. ಕೋರಮಂಗಲದ ವೆಂಕಟಾಪುರದಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ಬದರೀನಾಥದಲ್ಲಿರುವ ಶ್ರೀ ವೆಂಕಟೇಶ್ವರ ತದ್ರೂಪವನ್ನು ಇಲ್ಲಿ ನಿರ್ಮಿಸಲಾಗಿದೆ. ವೆಂಕಟೇಶ್ವರನ ಪಾದದಿಂದ ಗಂಗೆ ಹರಿದು ಬರುತ್ತಿರುವ ತದ್ರೂಪವನ್ನೂ ಇಲ್ಲಿ ಭಕ್ತರಿಗಾಗಿ ನಿರ್ಮಿಸಲಾಗಿದೆ.
ಚಳಿ ಹಾಗೂ ಮೋಡದ ವಾತಾವರಣವಿದ್ದರೂ ಭಕ್ತರು ವೆಂಕಟೇಶ್ವರನ ದರ್ಶನ ಪಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ದೇವಸ್ಥಾನದಲ್ಲಿ ದೇವರ ದರ್ಶನ ಪಡೆದವರಿಗೆ ಉಚಿತವಾಗಿ ದೇವರ ಪ್ರಸಾದವಾಗಿ ಲಡ್ಡುಗಳನ್ನು ವಿತರಿಸಲಾಗುತ್ತಿದೆ.