ಬೆಂಗಳೂರು:ಬೆಳಕಿನ ಹಬ್ಬ ದೀಪಾವಳಿ ಆಚರಣೆ ರಾಜ್ಯಾದ್ಯಂತ ನಡೆಯುತ್ತಿದೆ. ಬುಧವಾರ ದೀಪಾವಳಿಯ ಬಲಿಪಾಡ್ಯಮಿ ಹಿನ್ನೆಲೆ ಖರೀದಿ ಭರಾಟೆ ಜೋರಾಗಿದೆ. ಮಾರುಕಟ್ಟೆ ಪ್ರದೇಶ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳಲ್ಲಿ ಜನಸ್ತೋಮ ಕಂಡುಬಂತು.
ಖರೀದಿಯಲ್ಲಿ ತೊಡಗಿದ ಮಹಿಳೆಯರು ಎಲ್ಲೆಡೆ ಮನೆಯ ಮುಂಭಾಗದಲ್ಲಿ ಕಟ್ಟಲಾಗುವ ಆಕಾಶ ಬುಟ್ಟಿ, ಪ್ಲಾಸ್ಟಿಕ್ ಮಾವಿನ ತೋರಣ ಮತ್ತು ಹಣತೆ ಮತ್ತಿತರ ವಸ್ತುಗಳ ಖರೀದಿಗೆ ಗೃಹಿಣಿಯರು ಆಸಕ್ತಿ ತೋರಿದರೆ, ಹಸಿರು ಪಟಾಕಿಗಳ ಖರೀದಿಯ ಭರಾಟೆಯಲ್ಲಿ ಮಕ್ಕಳು, ಯುವಕ - ಯುವತಿಯರು ನಿರತರಾಗಿದ್ದಾರೆ.
ಈಗಾಗಲೇ ಮಾರುಕಟ್ಟೆಯಲ್ಲಿ ಆಕಾಶ ಬುಟ್ಟಿಗಳು ಝಗಮಗಿಸುತ್ತಿವೆ. ಪ್ರತಿವರ್ಷದಂತೆ ಈ ವರ್ಷವೂ ಮಣ್ಣಿನ ದೀಪಕ್ಕೆ ಭಾರಿ ಬೇಡಿಕೆ ಇದೆ. ವಿಭಿನ್ನ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಮಣ್ಣಿನ ದೀಪ, ಬಣ್ಣ ಬಣ್ಣದ ಕ್ಯಾಂಡಲ್‌ಗಳನ್ನು ಜನರು ಮುಗಿಬಿದ್ದು ಖರೀದಿಸುತ್ತಿದ್ದಾರೆ. ಒಂದು ಡಜನ್ ಮಣ್ಣಿನ ಹಣತೆಗೆ ರೂ.50 ರಿಂದ 60 ರವರೆಗೆ ಮಾರಾಟ ಮಾಡಲಾಗುತ್ತಿದೆ.
ದೀಪಾವಳಿಯ ಬಲಿಪಾಡ್ಯಮಿ ಹಿನ್ನೆಲೆ ವಿವಿಧ ವಸ್ತುಗಳನ್ನು ಖರೀದಿಸಿದ ಮಹಿಳೆಯರು ಹಸಿರು ಪಟಾಕಿ ಖರೀದಿ ಜೋರು:ಪ್ರಮುಖವಾಗಿ ದೀಪಾವಳಿ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಪಟಾಕಿ ಮಾರಾಟ ಮಳಿಗೆಗಳು ತಲೆ ಎತ್ತಿವೆ. ಗ್ರಾಹಕರು ಪಟಾಕಿ ಖರೀದಿಗೆ ಮುಂದಾಗಿದ್ದಾರೆ. ಈ ಬಾರಿ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಬಿಬಿಎಂಪಿ ಅವಕಾಶ ಕಲ್ಪಿಸಿದೆ. ಅದರಂತೆ ಶಾಲೆ ಕಾಲೇಜು, ಆಟದ ಮೈದಾನಗಳಲ್ಲಿ ಹಸಿರು ಪಟಾಕಿ ಮಳಿಗೆಗಳನ್ನು ಹಾಕಲಾಗಿದೆ. ಹಬ್ಬಕ್ಕೆ ಮಾರಾಟ ಇಂದೂ ಕೂಡ ಜೋರಾಗಿದೆ.
ಪ್ರತಿಯೊಂದು ಪಟಾಕಿ ಬಾಕ್ಸ್‌ಗಳ ಮೇಲೆ ಹಸಿರು ಚಿಹ್ನೆ ಮತ್ತು ಕ್ಯೂಆರ್ ಕೋಡ್ ಕಡ್ಡಾಯ ಮಾಡಲಾಗಿದ್ದು, ಬಹುತೇಕ ಕಡೆ ನಿಯಮ ಪಾಲಿಸಲಾಗುತ್ತಿದೆ. ಜೊತೆಗೆ, ಪೊಲೀಸ್ ಇಲಾಖೆ, ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ತರಹೇವಾರಿ ಪಟಾಕಿಗೆ ಬ್ರೇಕ್:ಮಾರುಕಟ್ಟೆಗಳಲ್ಲಿ ತರಹೇವಾರಿ ಪಟಾಕಿಗೆ ಬ್ರೇಕ್ ಬಿದ್ದಿದೆ. ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅನುಮತಿ ನೀಡಿರುವುದು ಮಾರಾಟದ ಮೇಲೆ ಗಂಭೀರ ಪರಿಣಾಮ ಬೀರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಪ್ರಸ್ತುತ ವರ್ಷದ ಪಟಾಕಿ ಬೆಲೆಯಲ್ಲಿ ಶೇ.40ರಷ್ಟು ಏರಿಕೆಯಾಗಿದೆ.
ರಂಗು ರಂಗಿನ ಆಕಾಶಬುಟ್ಟಿ:ಗಾತ್ರಕ್ಕೆ ಅನುಗುಣವಾಗಿ ಆಕಾಶ ಬುಟ್ಟಿಗಳು ಮಾರಾಟಕ್ಕಿದ್ದು, ರೂ.100 ರಿಂದ 2,000 ರವರೆಗೆ ಮಾರಾಟವಾಗುತ್ತಿವೆ. ನಕ್ಷತ್ರ ಮಾದರಿ, ಕಂದಿಲು ಆಕಾರದ ಆಕಾಶ ಬುಟ್ಟಿಗಳು, ಕೋಮಲ್ ಡಿಸೈನ್, ಗುಲಾಬ್ ರಂಗೀಲಾ, ಚಂದ್ರನ ಆಕಾರದ ಆಕಾಶ ಬುಟ್ಟಿ ಖರೀದಿದಾರರನ್ನು ಆಕರ್ಷಿಸುತ್ತಿವೆ. ದೆಹಲಿ, ಮುಂಬಯಿ ಮತ್ತು ಕಲ್ಕತ್ತಾ, ಮಹಾರಾಷ್ಟ್ರ ಪ್ರದೇಶಗಳಿಂದ ಈ ಆಕಾಶ ಬುಟ್ಟಿಗಳನ್ನು ತಂದು ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಖರೀದಿ ಜೋರು ಫ್ಯಾನ್ಸಿ ಸ್ಟೋರ್‌ಗಳು ರಶ್:ನಗರದ ಮಾರುಕಟ್ಟೆಯಲ್ಲಿನ ಬಟ್ಟೆ ಮತ್ತು ಫ್ಯಾನ್ಸಿ ಸ್ಟೋರ್‌ಗಳು ಫುಲ್ ರಶ್ ಆಗಿದ್ದವು. ತಮ್ಮ ಕುಟುಂಬಗಳಿಗೆ ಬಟ್ಟೆ ಸೇರಿ ಇತರ ವಸ್ತುಗಳನ್ನು ಸಾರ್ವಜನಿಕರು ಖರೀದಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಕಿರಾಣಿ ಅಂಗಡಿಗಳಲ್ಲಿ ಪೂಜಾ ಸಾಮಗ್ರಿ ಮಾರಾಟ ಜೋರಾಗಿತ್ತು.
ಇದನ್ನೂ ಓದಿ:ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: ಕಣ್ಣಿನ ಆಸ್ಪತ್ರೆಗಳಲ್ಲಿ 43 ಜನರಿಗೆ ಚಿಕಿತ್ಸೆ