ಬೆಂಗಳೂರು :ಹಾನಗಲ್ ವಿಧಾನಸಭೆ ಉಪಚುನಾವಣೆ ಗೆಲುವಿನ ಹಿನ್ನೆಲೆ ನಗರದ ಕುವೆಂಪು ರಸ್ತೆಯ ಕೆಪಿಸಿಸಿ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಕೆಪಿಸಿಸಿ ಕಚೇರಿ ಮುಂಭಾಗ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ ಪಟಾಕಿ ಸಿಡಿಸ ಸಂಭ್ರಮಿಸಿದ ಕಾರ್ಯಕರ್ತರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಾಥ್ ನೀಡಿದರು. ಸಾಕಷ್ಟು ಸಮಯ ಕ್ವೀನ್ಸ್ ರಸ್ತೆ ಸಂಚಾರವನ್ನು ಬಂದ್ ಮಾಡಲಾಯಿತು. ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗರೆಡ್ಡಿ, ಶಾಸಕ ರಿಜ್ವಾನ್ ಅರ್ಷದ್, ನಲಪಾಡ್ ಹ್ಯಾರಿಸ್ ಸೇರಿದಂತೆ ಹಲವರು ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿದ್ದರು.
ಈ ಬೈ ಎಲೆಕ್ಷನ್ ಫಲಿತಾಂಶ ಕರ್ನಾಟಕಕ್ಕೆ ಸೀಮಿತ ಅಲ್ಲ. ಇಡೀ ಭಾರತದಲ್ಲಿ ಬದಲಾವಣೆ ಅಲೆ ಪ್ರಾರಂಭವಾಗಿದೆ. ಬಿಜೆಪಿ ಎಷ್ಟು ಸೀಟು ಪಡೆದಿದೆಯೋ ಅಷ್ಟೇ ಸೀಟು ಪಡೆದಿದೆ. ಸ್ಥಳೀಯ ಪಕ್ಷಗಳು ಕೂಡ ದೇಶದ ಇತರ ಕಡೆ ಪ್ರಾಬಲ್ಯ ತೋರಿಸಿವೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ಬರಬೇಕು ಎಂದು ಸೂಚಿಸಿದ್ದಾರೆ.
ಮತದಾರರ ತೀರ್ಪನ್ನ ನಾವು ಗೌರವಿಸುತ್ತೇವೆ. ಸಿಂದಗಿಯಲ್ಲಿ ನಾವು ಸೋತಿದ್ದೇವೆ. ಆದರೆ, ಕೊಟ್ಟ ಮತವನ್ನ ಗೌರವದಿಂದ ಸ್ವೀಕರಿಸುತ್ತೇವೆ. ಮುಂದಿನ ದಿನಗಳಲ್ಲಿ ಸಿಂದಗಿ ಕ್ಷೇತ್ರವನ್ನ ಕಾಂಗ್ರೆಸ್ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಕಾಂಗ್ರೆಸ್ ಕಾರ್ಯಕರ್ತರು ಯಾವುದೇ ಆಮಿಷಕ್ಕೆ ಒಳಗಾಗದೇ ಕಾಂಗ್ರೆಸ್ ಬಾವುಟ ಹಿಡಿದು ಕೆಲಸ ಮಾಡಿದ್ದಾರೆ. ಕಾರ್ಯಕರ್ತರಿಗೆ ಅಭಿನಂದಿಸುತ್ತೇನೆ. ನಾವು ಯಾರ ಜೊತೆನೂ ಅಲೆಯನ್ಸ್ ಮಾಡಿಕೊಂಡಿರಲಿಲ್ಲ. ನಮಗೆ ಸಿಂದಗಿಯಲ್ಲಿ ನಮ್ಮ ಮತ ಬಂದಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚು ಮತ ಪಡೆದ ಖುಷಿ ತಂದಿದೆ ಎಂದರು.
ಯಡಿಯೂರಪ್ಪ ಕಾಂಗ್ರೆಸ್ ಸಂಭ್ರಮಿಸೋದು ಬೇಡ ಎಂಬ ಹೇಳಿಕೆ ವಿಚಾರ ಮಾತನಾಡಿ, ಆಯ್ತು ಅವರು ಹೇಳಿದ ಹಾಗೇ ಕೇಳ್ತಿವಿ. ಈ ಫಲಿತಾಂಶ ಕೇವಲ ರಾಜ್ಯ ಅಲ್ಲ ದೇಶಕ್ಕೆ ದಿಕ್ಸೂಚಿ ಎಂದರು. ಜೆಡಿಎಸ್ ಕಾಂಗ್ರೆಸ್ ನಾಯಕರ ನಡುವೆ ವೈಯಕ್ತಿಕ ಆರೋಪ ಪ್ರತ್ಯಾರೋಪ ವಿಚಾರ ಮಾತನಾಡಿ, ನಮ್ಮ ಹೇಳಿಕೆಗಳಿಂದ ಯಾರಿಗಾದರು ಬೇಸರವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ. ನಾವು ಯಾರನ್ನೂ ವೈಯಕ್ತಿಕ ಟೀಕೆ ಮಾಡುವ ಉದ್ದೇಶ ಇರಲಿಲ್ಲ ಎಂದರು.