ಬೆಂಗಳೂರು : ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರು ನಾಮಕರಣಗೊಂಡು 50 ವರ್ಷಗಳು ಪೂರ್ಣಗೊಂಡ ಸಂಭ್ರಮದಲ್ಲಿ ರಾಜ್ಯ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ನಡುವೆ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
• ಕನ್ನಡ, ಕನ್ನಡಿಗ, ಕರ್ನಾಟಕದ ಬಗ್ಗೆ ದಿಢೀರ್ ಕಾಳಜಿ ಪ್ರದರ್ಶಿಸುತ್ತ ಕೇಂದ್ರ ಸರ್ಕಾರಕ್ಕೆ ಸರಣಿ ಪ್ರಶ್ನೆಯನ್ನಿಡುತ್ತಿರುವ ನೀವು ಎಂಬತ್ತರ ದಶಕದ ಐತಿಹಾಸಿಕ ಗೋಕಾಕ್ ಚಳವಳಿಯ ಹುಟ್ಟಿಗೆ ಕಾರಣರಾದವರಾರು ಎಂಬುದನ್ನು ಮರೆತಂತಿದೆ?
• ಕನ್ನಡ ಭಾಷೆಯ ಅಸ್ತಿತ್ವಕ್ಕೆ ಕೊಡಲಿ ಹಾಕಲು ಹೊರಟಿದ್ದ ಅಂದಿನ ಕಾಂಗ್ರೆಸ್ ಸರ್ಕಾರ ಗೋಕಾಕ್ ವರದಿಯನ್ನು ಮೂಲೆಗೆ ಸರಿಸಲು ಹೊರಟಾಗ ಇಂದಿರಾ ಓಲೈಕೆಯ ಕಾಂಗ್ರೆಸ್ಸಿಗರು ಏನು ಮಾಡುತ್ತಿದ್ದರು?
• ಗೋಕಾಕ್ ವರದಿ ಅನುಷ್ಠಾನಕ್ಕಾಗಿ ರಾಷ್ಟ್ರಕವಿ ಕುವೆಂಪು ಅವರು ದನಿ ಎತ್ತಿದರು, ಕನ್ನಡಿಗರ ಕಣ್ಮಣಿ ಡಾ. ರಾಜಕುಮಾರ್ ಅವರ ನೇತೃತ್ವದಲ್ಲಿ ಸಾಹಿತಿ-ಕಲಾವಿದರು ಬೀದಿಗಿಳಿದರು, ಲಕ್ಷಾಂತರ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿತ್ತು. ಇಂಥಾ ಕನ್ನಡ ವಿರೋಧಿ ಪರಿಸ್ಥಿತಿ ನಿರ್ಮಿಸಿದ ಕುಖ್ಯಾತಿ ಯಾರಿಗೆ ಸಲ್ಲಬೇಕು?
• ಕನ್ನಡ, ರೈತ, ದಲಿತ ಚಳವಳಿಗಳನ್ನು ದಮನ ಮಾಡಲು ಅಂದು ಹೋರಾಟಗಾರರ ಮೇಲೆ ಲಾಠಿ ಬೀಸಿದ್ದು, ಜೈಲಿಗೆ ತಳ್ಳಿದ್ದು, ಗುಂಡು ಹಾರಿಸಿದ್ದು ಅಮಾಯಕರ ಪ್ರಾಣ ತೆಗೆದದ್ದು ಇದಕ್ಕೆ ಉತ್ತರವೆಂಬಂತೆ 83ರ ಚುನಾವಣೆಯಲ್ಲಿ ಕಾಂಗ್ರೆಸ್ ಮಣ್ಣು ಮುಕ್ಕಿದ್ದು, ಬಿಜೆಪಿಗೆ ಕನ್ನಡ ಜನತೆ ಹೃದಯದ ಬಾಗಿಲು ತೆರೆದು ಕೊಟ್ಟಿದ್ದು ಇತಿಹಾಸ, ಇದು ಮರೆಯಲು ಹೇಗೆ ಸಾಧ್ಯ?