ಬೆಂಗಳೂರು: ರಾಜ್ಯ ವಿಧಾನಸಭಾ ಅವಧಿಯು ಮೇ 24ಕ್ಕೆ ಅಂತ್ಯವಾಗಲಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆ 6.1 ಕೋಟಿ ಇದೆ. ಇದರಲ್ಲಿ ಮಹಿಳೆಯರು 3.01 ಕೋಟಿ ಹಾಗೂ ಪುರುಷರು 3.01 ಕೋಟಿ ಇದ್ದಾರೆ. ಈ ಪೈಕಿ ಒಟ್ಟಾರೆ 5.21 ಕೋಟಿ ಮತದಾರರು ಇದ್ದು, 2.62 ಕೋಟಿ ಪುರುಷ ಮತದಾರರು, 2.59 ಕೋಟಿ ಮಹಿಳೆಯರು ಮತ ಹಕ್ಕು ಹೊಂದಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣಾ ಸಿದ್ಧತೆಯ ಪರಿಶೀಲನೆಯ ಕುರಿತು ಚುನಾವಣಾ ಆಯೋಗವು ಮಹತ್ವದ ಸುದ್ದಿಗೋಷ್ಠಿ ನಡೆಸಿತು. ರಾಜೀವ್ ಕುಮಾರ್ ಮಾತನಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಮತ್ತು 15 ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರಗಳಿದ್ದು, ಸಾಮಾನ್ಯ 173 ಕ್ಷೇತ್ರಗಳು ಇದೆ. ಈ ಬಾರಿ 9.17 ಲಕ್ಷ ಹೊಸ ಮತದಾರರು ಇದ್ದು, 1.25 ಲಕ್ಷ 17 ವರ್ಷಕ್ಕೂ ಮೇಲ್ಪಟ್ಟ ಯುವಕರು ಮುಂಚಿತವಾಗಿ ಮತದಾನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ 42,756 ತೃತೀಯ ಲಿಂಗಿಗಳು ಇದ್ದು, 41,312 ಜನರು ಮತದಾನಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 80 ವರ್ಷಕ್ಕೂ ಮೇಲ್ಪಟ್ಟವರು 12.15 ಲಕ್ಷ ಜನ ಮತದಾರರು ಇದ್ದಾರೆ. ಈ ಹಿಂದೆ 2018ರಲ್ಲಿ ಹಿರಿಯ ಮತದಾರರ ಸಂಖ್ಯೆ 9.17 ಇತ್ತು. ಇದರಲ್ಲಿ ಶೇ.32.5ರಷ್ಟು ಏರಿಕೆ ಕಂಡಿದೆ. ಜೊತೆಗೆ ವಿಶೇಷಚೇತನರ ಮತದಾರರ ಸಂಖ್ಯೆ 5.55 ಲಕ್ಷ ಇದ್ದು, 2018ರಲ್ಲಿ ಇವರ ಸಂಖ್ಯೆ 2.15 ಲಕ್ಷ ಮಾತ್ರ ಇತ್ತು ಎಂದು ವಿವರಿಸಿದರು.
ಎಲ್ಲರೂ ಮತದಾನ ಮಾಡಲು ಅವಕಾಶ ದೊರೆಯಬೇಕು ಎನ್ನುವ ಉದ್ದೇಶದಿಂದ ಮೊದಲ ಬಾರಿಗೆ 80 ವರ್ಷಕ್ಕೂ ಹೆಚ್ಚಿನ ವಯಸ್ಸಿನ ಹಾಗೂ ವಿಶೇಷ ಚೇತನರಿಗೆ ಮೊದಲ ಬಾರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಮತದಾನ ಕೇಂದ್ರಗಳಲ್ಲಿ ಇವರಿಗೆ ವಿಶೇಷ ಸೌಲಭ್ಯಗಳನ್ನು ಮಾಡಲಾಗಿದೆ. ಆದರೂ, ಮತದಾನ ಕೇಂದ್ರಕ್ಕೆ ಆಗಮಿಸಲು ಸಾಧ್ಯವಾಗದೇ ಇರುವಂತಹ ಮತದಾರರಿಗೆ ಮನೆಯಿಂದಲೇ ಮತದಾನ ಮಾಡುವ ವಿಶೇಷ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಪ್ರಕಟಿಸಿದರು.
58,282 ಮತಗಟ್ಟೆ: ವಿಧಾನಸಭಾ ಚುನಾವಣೆಗೆ 224 ಕ್ಷೇತ್ರಗಳಲ್ಲಿ ಒಟ್ಟಾರೆ 58,282 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಪ್ರತಿ ಪಿಎಸ್‌ಗೆ ಸರಾಸರಿ ಮತದಾರರು 883.50ರಷ್ಟು ಮತದಾರರು ಇರಲಿದ್ದಾರೆ. ಎಲ್ಲ ಮತದಾನ ಕೇಂದ್ರಗಳು ವೆಬ್‌ಕಾಸ್ಟಿಂಗ್ ಸೌಲಭ್ಯವನ್ನು ಹೊಂದಿವೆ. ನಗರ ಪ್ರದೇಶಗಳಲ್ಲಿ 24,063 ಮತ್ತು ಗ್ರಾಮೀಣ ಪ್ರದೇಶದಲ್ಲಿ 34,219 ಮತಗಟ್ಟೆಗಳು ಇರಲಿವೆ. 1,320 ಮತಗಟ್ಟೆಗಳನ್ನು ಸಂಪೂರ್ಣವಾಗಿ ಮಹಿಳಾ ಅಧಿಕಾರಿಗಳೇ ನಿರ್ವಹಿಸುತ್ತಾರೆ. 224 ಯುವ ಅಧಿಕಾರಿಗಳು ನಿರ್ವಣೆಯ, 224 ವಿಶೇಷ ಚೇತನರು ಮತ್ತು 240 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು. ದುರ್ಬಲ ಬುಡಕಟ್ಟು ಜನರು ಕೂಡ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆಂದು ಆಯೋಗ ಬಯಸುತ್ತಿದೆ. ಈ ನಿಟ್ಟಿನಲ್ಲಿ ಬುಡಕಟ್ಟಿನ 18 ವರ್ಷಕ್ಕಿಂತ ಮೇಲ್ಪಟ್ಟ ಅರ್ಹ 31,517 (ಶೇ.100ರಷ್ಟು) ಜನರ ನೋಂದಣಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.