ಇತ್ತೀಚೆಗಷ್ಟೇ ಸಿಡಿಎಸ್ (ಚೀಪ್ ಆಫ್ ಡಿಫೆನ್ಸ್ ಸ್ಟಾಫ್) ಅಂದರೆ ಮೂರೂ ಸೇನೆಗಳಿಗೆ ಮುಖ್ಯಸ್ಥರ ಹುದ್ದೆ ಸೃಷ್ಟಿಯ ಘೋಷಣೆ ಮಾಡಲಾಗಿದ್ದು, ಈ ಹುದ್ದೆಯ ಉದ್ದೇಶ ಮತ್ತು ಆಡಳಿತದ ಪ್ರಮುಖ ವಲಯದಲ್ಲಿ ಈ ಹುದ್ದೆ ಪಡೆದುಕೊಳ್ಳಲಿರುವ ಸ್ಥಾನಮಾನದ ಬಗ್ಗೆ ಸೂಕ್ಷ್ಮ ಎಚ್ಚರಿಕೆಯಿಂದಲೇ ನಾವು ಸ್ವಾಗತವನ್ನೂ ಮಾಡಬೇಕಿದೆ. ಈ ಹುದ್ದೆಯನ್ನು ಸರ್ಕಾರ ಡಿಸೆಂಬರ್ 24ರಂದು ಘೋಷಣೆ ಮಾಡಿದೆ.
ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದಲೂ ಮಾತುಕತೆ ಚರ್ಚೆ ನಡೆಯುತ್ತಿದ್ದರೂ, ಕೊನೆಗೂ ಕ್ರಮ ಕೈಗೊಂಡಿದ್ದಕ್ಕೆ ಮೋದಿ ಸರ್ಕಾರವನ್ನು ನಾವು ಮೆಚ್ಚಬೇಕಿದೆ. ಸಿಡಿಎಸ್ ಹುದ್ದೆ ಸೃಷ್ಟಿಯ ಕಲ್ಪನೆ 2001ರಲ್ಲೇ ಹುಟ್ಟಿಕೊಂಡಿತ್ತು ಎಂಬುದನ್ನು ನಾವು ಈ ಸಂದರ್ಭದಲ್ಲೆ ಹಳೆಯ ನೆನಪುಗಳನ್ನು ಕೆದಕಬಹುದು. ಈ ಹುದ್ದೆಗೆ ಯಾವ ರೀತಿಯಲ್ಲಿ ಅಧಿಕಾರ ನೀಡಲಾಗುತ್ತದೆ ಎಂಬುದೇ ಸದ್ಯ ಇರುವ ನಿಜವಾದ ಸವಾಲು. ಅಷ್ಟೇ ಸರ್ಕಾರದ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯಲ್ಲಿ ಈ ಹುದ್ದೆಗೆ ಇರುವ ವ್ಯಾಪ್ತಿ ಕೂಡ ಮಹತ್ವ ಪಡೆಯುತ್ತದೆ.
ದೇಶದ ಯಾವುದೇ ವಿಚಾರಗಳಿಗೆ ಸಂಬಂಧಿಸಿದಂತೆ ಸದ್ಯ ಸೇನೆಯ ಮೂರೂ ಮುಖ್ಯಸ್ಥರನ್ನು ಸಂಪರ್ಕಿಸಬೇಕಾಗುತ್ತದೆ ಮತ್ತು ಈ ಮೂರೂ ಮುಖ್ಯಸ್ಥರು ವಿಭಿನ್ನ ಅಭಿಪ್ರಾಯಗಳನ್ನು ನೀಡಬಹುದಾಗಿರುತ್ತದೆ. ಒಂದೇ ಮುಖ್ಯಸ್ಥರನ್ನು ನೇಮಿಸಿದರೆ ಸರ್ಕಾರವು ಸುಲಭ ಸಂವಹನ ನಡೆಸಬಹುದು ಮತ್ತು ಸಲಹೆಯನ್ನೂ ಪಡೆಯುವುದು ಸುಲಭ ಎಂಬ ಉದ್ದೇಶದಿಂದಲೇ ಸಿಡಿಎಸ್ ಅನ್ನು ರೂಪಿಸಲಾಯಿತು. ಈ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿವೆ. ಈಗಿನ ಸೇನಾ ಮುಖ್ಯಸ್ಥರಿಗಿಂತ ಮೇಲಿನ ಹುದ್ದೆಯಲ್ಲಿ ಸಿಡಿಎಸ್ ಇರಬೇಕು ಎಂಬ ಪ್ರಸ್ತಾವನೆ ಸಲ್ಲಿಸಲಾಗಿತ್ತು ಮತ್ತು ಇನ್ನೂ ಕೆಲವರು ಇವರಿಗೆ ಫೈವ್ ಸ್ಟಾರ್ ನೀಡಬೇಕು ಎಂದೂ ಪ್ರಸ್ತಾಪಿಸಿದ್ದರು. ಭಾರತಕ್ಕೆ ಯಾವ ಮಾದರಿ ಸೂಕ್ತ ಎಂದು ಹಲವು ದೇಶಗಳಲ್ಲಿರುವ ವಿವಿಧ ಮಾದರಿಗಳನ್ನು ನೋಡಿ, ಪರಿಶೀಲಿಸಿ, ಅಧ್ಯಯನವನ್ನೂ ಮಾಡಲಾಯಿತು.
ಆದರೆ, ಕೊನೆಗೂ ಅಂತಿಮವಾಗಿದ್ದು ಭಾರತದ್ದೇ ಆದ ವಿಶಿಷ್ಟ ಮಾದರಿ. ಇದನ್ನು ರಾಷ್ಟ್ರೀಯ ಭದ್ರತೆಗಾಗಿ ಮೋದಿ ಸರ್ಕಾರ ವಿಶೇಷವಾಗಿ ರೂಪಿಸಿದೆ ಎಂಬುದಂತೂ ನಿಚ್ಚಳವಾಗಿದೆ. ಈ ಕುರಿತು ಸರ್ಕಾರ ಪ್ರಕಟಣೆ ಹೊರಡಿಸಿತ್ತು. ಇದರಲ್ಲಿ ಈ ಹುದ್ದೆ ಏನು ಮಾಡುತ್ತದೆ ಎಂಬ ಕುರಿತು ಸ್ಪಷ್ಟವಾಗಿ ವಿವರಿಸಲಾಗಿದೆ: “ಎಲ್ಲ ಮೂರೂ ಸೇವೆಗಳ ವಿಚಾರದಲ್ಲಿ ರಕ್ಷಣಾ ಮಂತ್ರಿಗೆ ಪ್ರಧಾನ ಸೇನಾ ಸಲಹೆಗಾರರಾಗಿ ಕೆಲಸ ಮಾಡಲಿದ್ದಾರೆ. ತಮ್ಮ ಪಡೆಗಳಿಗೆ ಸಂಬಂಧಿಸಿದ ಕಾಳಜಿಗಳನ್ನು ವಿಶೇಷವಾಗಿ ರಕ್ಷಣಾ ಮಂತ್ರಿಗೆ ಹಿಂದಿನಂತೆಯೇ ಮುಂದೆಯೂ ಸಲಹೆ ನೀಡುತ್ತಲೇ ಇರುತ್ತಾರೆ. ಸಿಡಿಎಸ್‌ಗೆ ಯಾವುದೇ ಸೇನಾ ಕಮಾಂಡ್ ಇರುವುದಿಲ್ಲ. ಅಷ್ಟೇ ಅಲ್ಲ, ಮೂರೂ ಸೇನೆ ಮುಖ್ಯಸ್ಥರ ಮೇಲೆಯೂ ಯಾವುದೇ ಕಮಾಂಡ್ ಹೊಂದಿರುವುದಿಲ್ಲ. ಹೀಗಾಗಿ ರಾಜಕೀಯ ನಾಯಕತ್ವಕ್ಕೆ ಯಾವುದೇ ನಿಷ್ಪಕ್ಷಪಾತ ಸಲಹೆಯನ್ನು ಇವರು ನೀಡಬಲ್ಲವರಾಗಿರುತ್ತಾರೆ.”
ಹೀಗಾಗಿ ರಕ್ಷಣಾ ಸಚಿವರಿಗೆ ಕೇವಲ ಪ್ರಧಾನ ಸಲಹೆಗಾರರಾಗಿ ಸಿಡಿಎಸ್ ಕೆಲಸ ಮಾಡುತ್ತಾರೆ ಮತ್ತು ಇವರು ಸಿಂಗಲ್ ಪಾಯಿಂಟ್ ಸಲಹೆಗಾರರಾಗಿರುವುದಿಲ್ಲ. ಅಂದರೆ ಸರ್ಕಾರಕ್ಕೆ ಸೇನೆಯ ಕಡೆಯಿಂದ ಇವರು ಮಾತ್ರ ಸಲಹೆ ಮಾಡುವುದಿಲ್ಲ. ಇನ್ನೂ ಮುಂದೆ ಹೋಗಿ ಸಿಡಿಎಸ್ ಎರಡು ಜವಾಬ್ದಾರಿಯನ್ನು ಹೊಂದಿರುತ್ತಾರೆ. ಒಂದು ಸಿಒಎಸ್‌ಸಿಯ ಶಾಶ್ವತ ಚೇರ್ಮನ್ ಆಗಿರುತ್ತಾರೆ. ಅಂದರೆ ಚೀಫ್ಸ್ ಆಫ್ ಸ್ಟಾಫ್ ಕಮಿಟಿಗೆ ಇವರು ಶಾಶ್ವತವಾಗಿ ಮುಖ್ಯಸ್ಥರಾಗಿರುತ್ತಾರೆ. ಎರಡನೆಯದಾಗಿ, ಡಿಎಂಎ ಮುಖ್ಯಸ್ಥರಾಗಿರುತ್ತಾರೆ. ಅಂದರೆ, ಹಣಕಾಸು ಸಚಿವಾಲಯದಲ್ಲಿರುವ ಡಿಪಾರ್ಟ್‌ಮೆಂಟ್ ಆಫ್ ಮಿಲಿಟರಿ ಅಫೇರ್ಸ್ ಅಥವಾ ಸೇನಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಅವರು ಇಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಾರೆ.
ಇನ್ನೂ ಮಹತ್ವದ ಸಂಗತಿಯೆಂದರೆ ಸಿಡಿಎಸ್‌ಗೆ ಸಂಬಳ ಮತ್ತು ಸೌಲಭ್ಯಗಳು ಸೇನಾ ಪಡೆಯ ಮುಖ್ಯಸ್ಥರಿಗೆ ಸಮಾನವಾದ ಪ್ರಮಾಣದಲ್ಲಿ ಇರುತ್ತದೆ. ಹಾಗಂತ ಸೇನಾ ಪಡೆಗಳ ಮುಖ್ಯಸ್ಥರಿಗೆ ಸಮಾನವಾದವರಲ್ಲ. ಬದಲಿಗೆ ಇವರು ಮೂರೂ ಸೇನಾ ಪಡೆಗಳಿಗಿಂತ ಮೇಲಿನ ಹುದ್ದೆಯಲ್ಲೇ ಇರುತ್ತಾರೆ. ಈ ಮೇಲಿನ ಹುದ್ದೆ ಕೇವಲ ಶಿಷ್ಟಾಚಾರದಲ್ಲಿ ಮಾತ್ರ ಇರುತ್ತದೆ ಎಂಬುದು ಗಮನಾರ್ಹ.
ಸಿಡಿಎಸ್‌ಗೆ ನೀಡಿರುವ ಜವಾಬ್ದಾರಿಗಳಲ್ಲಿ ಈ ಕೆಲವು ಅಂಶಗಳು ಬಹಳ ಮುಖ್ಯವಾದವು. ಸೇನಾ ಪಡೆಗಳಲ್ಲಿ ನೇಮಕಾತಿ, ತರಬೇತಿ ಮತ್ತು ಸಿಬ್ಬಂದಿ ವಿಚಾರದಲ್ಲಿ ಸಮಗ್ರತೆ ಮತ್ತು ಸಮಾನತೆಯನ್ನು ಪ್ರೋತ್ಸಾಹಿಸುವುದು ಇವರ ಕೆಲಸ ಮಾಡುತ್ತದೆ. ಇದಕ್ಕಾಗಿ ಇವರು ಒಟ್ಟಾಗಿ ಯೋಜನೆ ರೂಪಿಸುವುದು ಮತ್ತು ಅವರ ಅಗತ್ಯಗಳನ್ನು ಒಟ್ಟಾಗಿ ಪರಿಗಣಿಸಬೇಕು. ಸೇನೆ ಕಾರ್ಯನಿರ್ವಹಣೆಗಳಲ್ಲಿ ಒಗ್ಗಟ್ಟನ್ನು ತರುವುದಕ್ಕಾಗಿ ಮೂರೂ ಸೇನಾ ಪಡೆಗಳಲ್ಲಿ ಸಂಪನ್ಮೂಲಗಳ ಸೂಕ್ತ ಬಳಕೆಗೆ ಇವರು ಅನುಕೂಲ ಒದಗಿಸಬೇಕು. ಇದಕ್ಕಾಗಿ ಇವರು ಜಂಟಿ ಕಮಾಂಡ್‌ಗಳನ್ನೂ ಜಾರಿಗೆ ತರಬಹುದು. ಎಲ್ಲ ಸೇನಾಪಡೆಗಳಲ್ಲಿ ದೇಶಿ ಸಲಕರಣೆಯ ಬಳಕೆಯನ್ನು ಇವರು ಉತ್ತೇಜಿಸಬೇಕು ಎಂಬುದನ್ನು ಸಿಡಿಎಸ್ ಹುದ್ದೆಯ ಧ್ಯೇಯ ಹಾಗೂ ಕರ್ತವ್ಯಗಳಲ್ಲಿ ವಿವರಿಸಲಾಗಿದೆ.
ಇವರು ಆಂತರಿಕವಾಗಿ ಮೂರೂ ಸೇನೆಗಳಲ್ಲಿ ಒಮ್ಮತವನ್ನು ತರುವಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಇದರಿಂದ ಮೂರು ಸೇನೆಗಳು ಒಟ್ಟಾಗಿ ಕಾರ್ಯಾಚರಣೆ ಮಾಡುವುದು ಇನ್ನಷ್ಟು ಸುಲಭವಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇದಾಗಲಿದೆ.