ಬೆಂಗಳೂರು:ಎಸ್ಐಟಿ ತನಿಖಾಧಿಕಾರಿಗಳ ಮೇಲೆ ಸರ್ಕಾರದ ಮುಖಾಂತರ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಒತ್ತಡ ಹಾಕುತ್ತಿದ್ದಾರೆ. ಇದರಿಂದ ನನ್ನ ಚಾರಿತ್ರ್ಯವಧೆಯಾಗಿದ್ದು ನ್ಯಾಯಸಮ್ಮತವಾಗಿ ತನಿಖೆ ನಡೆಸಬೇಕೆಂದು ಕೋರಿ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ಸಿಡಿ ಲೇಡಿ ಪತ್ರ ಬರೆದಿದ್ದಾಳೆ.
ಈ ಪ್ರಕರಣದಲ್ಲಿ ನನ್ನನ್ನು ಆರೋಪಿಯನ್ನಾಗಿ ಮಾಡುವ ಪ್ರಯತ್ನಗಳಾಗುತ್ತಿವೆ. ತನಿಖಾಧಿಕಾರಿಗಳಿಗೆ ಸರ್ಕಾರದ ಮೂಲಕ ಒತ್ತಡ ಹಾಕಿಸಿ ತೇಜೋವಧೆ ಮಾಡುವ ಕೆಲಸವಾಗುತ್ತಿವೆ ಎಂದು ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ.
ಪತ್ರದಲ್ಲಿ ಏನಿದೆ ?
'ಕೆಲಸ ಕೊಡಿಸುವುದಾಗಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ವಕೀಲರ ಮೂಲಕ ಮಾ. 26 ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಮಾಜಿ ಸಚಿವರ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ನಡುವೆ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶರ ಮುಂದೆ ಸಿಆರ್ ಪಿಸಿ 164ನಡಿ ಹೇಳಿಕೆ ನೀಡಿದ್ದೇನೆ. ಬಳಿಕ ಎಸ್ಐಟಿ ಅಧಿಕಾರಿಗಳು ಆಡುಗೋಡಿ ವಿಚಾರಣಾ ಕೇಂದ್ರಕ್ಕೆ ನನ್ನನ್ನು ಕರೆದೊಯ್ದರು. ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ತನಿಖಾಧಿಕಾರಿ ಎಸಿಪಿ ಕವಿತಾ ಸೆಕ್ಷನ್161ರಡಿ ವಿಚಾರಣೆ ಪ್ರಕ್ರಿಯೆ ಆರಂಭಿಸಿದರು. ಅವರ ಪ್ರಶ್ನೆಗಳಿಗೆ ವಿವರವಾಗಿ ಉತ್ತರಿಸಿದೆ. ಮಾ.31 ರಂದು ವೈದ್ಯಕೀಯ ಪರೀಕ್ಷೆ ಮಾಡಿಸಿದರು. ಏ.1 ರಂದು ತಾನು ವಾಸಿಸುವ ಸ್ಥಳ ಹಾಗೂ ಕೃತ್ಯ ನಡೆದ ಸ್ಥಳವಾದ ಮಲ್ಲೇಶ್ಚರಂ ಅಪಾರ್ಟ್ಮೆಂಟ್ ವೊಂದಕ್ಕೆ ಕರೆದುಕೊಂಡು ಮಹಜರಿಗೆ ಒಳಪಡಿಸಿದರು. ಅದಾದ ಬಳಿಕ ಮಾರನೇ ದಿನ ವಿಚಾರಣೆ ಮುಂದುವರೆಸಿದರು. ಇವೆಲ್ಲವನ್ನು ಗಮನಿಸುತ್ತಿದ್ದರೆ ನಾನು ಪ್ರಕರಣ ಸಂತ್ರಸ್ತೆಯೋ? ಆರೋಪಿಯೋ ಎಂಬ ಅನುಮಾನ ಕಾಡುತ್ತಿದೆ.
ಪ್ರಕರಣದ ಆರೋಪಿಗೆ ಕೇವಲ 3 ಗಂಟೆಗಳ ಕಾಲ ವಿಚಾರಣೆ ನಡೆಸಿ ಬಳಿಕ ವಕೀಲರ ಮೂಲಕ ವಿಚಾರಣೆಗೆ ಹಾಜರಾಗಲು ಅನುಮತಿ ನೀಡಿ ಮುಕ್ತವಾಗಿ ಓಡಾಡಿಕೊಂಡು ನನ್ನನ್ನು ಆರೋಪಿ ರೀತಿ ಒಂದು ದಿನವೂ ಬಿಡುವು ನೀಡದಂತೆ ಎಸ್ಐಟಿ ವಿಚಾರಣೆ ನಡೆಸುತ್ತಿದೆ. ರಮೇಶ್ ಜಾರಕಿಹೊಳಿ ನೀಡಿದ ದೂರಿನಲ್ಲಿ ನನ್ನ ಹೆಸರು ಇಲ್ಲದಿದ್ದರೂ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿರುವ ಸಾಕ್ಷ್ಯ ನಾಶ ಮಾಡಿ ನನ್ನನ್ನು ಆರೋಪಿಯನ್ನಾಗಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿಸುತ್ತಿದ್ದಾರೆ ಎಂದು ಯುವತಿ ಆರೋಪಿಸಿದ್ದಾಳೆ. ನಾನು ಪ್ರಕರಣದ ದೂರುದಾರಳಾಗಿದ್ದು, ನನ್ನ ಚಾರಿತ್ರ್ಯವಧೆ ಮಾಡುವ ಷಡ್ಯಂತ್ರವನ್ನು ಜಾರಕಿಹೊಳಿ ಮಾಡುತ್ತಿದ್ದಾರೆ. ಎಸ್ಐಟಿ ಮೇಲೆ ತೀವ್ರತರನಾದ ಒತ್ತಡವನ್ನು ಸರ್ಕಾರದ ಮೂಲಕ ಹಾಕಿಸಿದ್ದಾರೆ.
ಪ್ರತಿನಿತ್ಯ ಮಾಧ್ಯಮಗಳಲ್ಲಿ ನಾನು ಅತ್ಯಾಚಾರದ ಸಂತ್ರಸ್ತೆ ಎಂದು ಮರೆಮಾಚಲು ಸೃಷ್ಟಿತ ಸುದ್ದಿಗಳನ್ನು ಅವಹೇಳನಕಾರಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಇದುವರೆಗೂ ನಾನು ನೀಡಿದ ದೂರಿನ ಮೇರೆಗೆ ಆರೋಪಿ ವಿರುದ್ಧ ಗಂಭೀರವಾಗಿ ವಿಚಾರಣೆ ನಡೆಸುತ್ತಿರುವ ಬಗ್ಗೆ ನನಗೆ ವಿಶ್ವಾಸ ಮೂಡಿಲ್ಲ. ಇದರ ಜೊತೆ ಮುಖ್ಯಮಂತ್ರಿಗಳೇ ರಮೇಶ್ ಜಾರಕಿಹೊಳಿ ನಿರ್ದೋಷಿಯಾಗಿ ಹೊರಬರಲಿದ್ದಾರೆ ಎಂದು ಹೇಳಿರುವುದು ನನಗೆ ಆತಂಕ ಮೂಡಿಸಿದೆ. ನನ್ನ ಸಹಮತವಿಲ್ಲದೆ ಪ್ರಕರಣ ಸಂಬಂಧ ಗೃಹ ಇಲಾಖೆ ವಿಶೇಷ ಅಭಿಯೋಜಕರನ್ನು ನೇಮಿಸಿರುವುದಕ್ಕೆ ನನ್ನ ಆಕ್ಷೇಪವಿದೆ. ಇಡೀ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸುತ್ತಿರುವ ಬಗ್ಗೆ ನಂಬಿಕೆ ಇಲ್ಲವಾಗಿದೆ. ದಯಮಾಡಿ ತಾವು ಸರ್ಕಾರದ ಒತ್ತಡಕ್ಕೆ ಮಣಿಯದೆ, ಆರೋಪಿಗೆ ಯಾವುದೇ ರಿಯಾಯಿತಿ ನೀಡದೆ ನ್ಯಾಯಸಮ್ಮತವಾಗಿ ವಿಚಾರಣೆ ನಡೆಸಬೇಕೆಂದು' ಕಮಿಷನರ್ಗೆ ಬರೆದ ಪತ್ರದಲ್ಲಿ ಯುವತಿ ಮನವಿ ಮಾಡಿದ್ದಾಳೆ.