ಕರ್ನಾಟಕ

karnataka

By

Published : Jun 22, 2021, 2:27 PM IST

ETV Bharat / state

ಸಿಡಿ ಕೇಸ್ ಪಿಐಎಲ್ ವಿಚಾರಣೆಗೆ ಅರ್ಹವಲ್ಲ: ಜಾರಕಿಹೊಳಿ ಪರ ವಕೀಲರಿಂದ ಆಕ್ಷೇಪಣೆ ಸಲ್ಲಿಕೆ

ಸರ್ಕಾರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸದೆಯೇ ಗೃಹ ಸಚಿವರ ಸೂಚನೆ ಮೇರೆಗೆ ಎಸ್ಐಟಿ ರಚಿಸಿರುವ ಕ್ರಮ ನಿಯಮಬಾಹಿರ ಎಂದು ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

cd-case-rameh-jarkiholi-pro-lawyer-who-filed-objection
ಆಕ್ಷೇಪಣೆ ಸಲ್ಲಿಸಿದ ಜಾರಕಿಹೊಳಿ ಪರ ವಕೀಲರು

ಬೆಂಗಳೂರು: ಸಿಡಿ ಪ್ರಕರಣವನ್ನು ತನಿಖೆ ಮಾಡಲು ನಗರ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡ(ಎಸ್ಐಟಿ) ರಚಿಸಿರುವ ಕ್ರಮ ಕಾನೂನು ಬಾಹಿರ ಎಂದು ಆರೋಪಿಸಿ ಸಲ್ಲಿಸಿರುವ ಪಿಐಎಲ್‌ಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ತನಿಖೆ ನಡೆಸಲು ನಗರ ಪೊಲೀಸ್ ಆಯುಕ್ತರು ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ಗೃಹ ಸಚಿವರ ಸೂಚನೆ ಮೇರೆಗೆ ರಚಿಸಿದ್ದಾರೆ. ಸರ್ಕಾರ ಅಧಿಕೃತವಾಗಿ ಗೆಜೆಟ್ ನೋಟಿಫಿಕೇಷನ್ ಹೊರಡಿಸದೆಯೇ ಗೃಹ ಸಚಿವರ ಸೂಚನೆ ಮೇರೆಗೆ ಎಸ್ಐಟಿ ರಚಿಸಿರುವ ಕ್ರಮ ನಿಯಮಬಾಹಿರ ಎಂದು ಆಕ್ಷೇಪಿಸಿ ವಕೀಲೆ ಗೀತಾ ಮಿಶ್ರಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಈ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸುತ್ತಿದ್ದು, ಜಾರಕಿಹೊಳಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದಾರೆ. ಈ ಆಕ್ಷೇಪಣೆಯಲ್ಲಿ, ಗೃಹ ಸಚಿವರು ಪ್ರಕರಣದಲ್ಲಿ 7ನೇ ಪ್ರತಿವಾದಿಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ತನಿಖೆ ನಡೆಸಲು ಎಸ್ಐಟಿ ರಚಿಸಲು ನಿರ್ದೇಶಿಸಿದ್ದಾರೆ. ಅದರಂತೆ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ರಮೇಶ್ ಜಾರಕಿಹೊಳಿ ಕೋರಿಕೆ ಮೇರೆಗೆ ಎಸ್ಐಟಿ ರಚಿಸಿದ್ದರಿಂದ ಅದು ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣನ್ನಷ್ಟೇ ವಿಚಾರಣೆ ನಡೆಸುತ್ತಿತ್ತು.

ಆದರೆ, ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣವೂ ಜಾರಕಿಹೊಳಿ ದೂರಿಗೆ ಸಂಬಂಧಿಸಿದ್ದರಿಂದ ಈ ಪ್ರಕರಣವನ್ನೂ ತನಿಖೆ ಮಾಡುತ್ತಿದೆ. ಅರ್ಜಿದಾರರು ಆರೋಪಿಸಿರುವಂತೆ ಪ್ರಕರಣಗಳ ವಿಚಾರಣೆಗೆ ಎಸ್ಐಟಿ ರಚಿಸಿರುವುದು ಕಾನೂನು ಬಾಹಿರವಲ್ಲ. ಸರ್ಕಾರದ ನಿರ್ದೇಶನದ ಹೊರತಾಗಿಯೂ ನಗರ ಪೊಲೀಸ್ ಆಯುಕ್ತರಿಗೆ ವಿವಿಧ ಅಪರಾಧ ಪ್ರಕರಣಗಳ ತನಿಖೆಗೆ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 77 ಹಾಗೂ ಐಪಿಸಿ 36 ರಡಿ ತನಿಖಾ ತಂಡ ರಚಿಸಲು ಅವಕಾಶವಿದೆ. ಐಪಿಸಿ 173(2) ಅಡಿ ಎರಡು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯ ಮತ್ತು ಸರ್ಕಾರಕ್ಕೆ ತನಿಖಾ ವರದಿ ಸಲ್ಲಿಸಲು ಅವಕಾಶವಿದೆ.

ಇನ್ನು ತನಿಖೆಯಲ್ಲಿ ಪಕ್ಷಪಾತ ಮಾಡಲಾಗುತ್ತಿದೆ ಎಂಬ ಆರೋಪವೂ ಸುಳ್ಳು. ಪ್ರಕರಣವನ್ನು ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮುಖ್ಯವಾಗಿ ಪಿಐಎಲ್ ಸಲ್ಲಿಸಿರುವ ಅರ್ಜಿದಾರರಿಗೂ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಹೀಗಾಗಿ ಪಿಐಎಲ್ ವಿಚಾರಣೆಗೆ ಅರ್ಹವಲ್ಲವಾದ್ದರಿಂದ ಅದನ್ನು ವಜಾಮಾಡಬೇಕು ಎಂದು ಆಕ್ಷೇಪಣೆಯಲ್ಲಿ ಕೋರಲಾಗಿದೆ.

For All Latest Updates

ABOUT THE AUTHOR

...view details