ಬೆಂಗಳೂರು: ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ಪದ್ಮಶ್ರೀ ಪುರಸ್ಕೃತರಾದ ಸುಪ್ರೀಂಕೋರ್ಟ್ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ವಾದ ಮಂಡಿಸಲು ಮುಂದಾಗಿದ್ದಾರೆ. ಸಿಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ವಕೀಲ ಉಮೇಶ್ ಎಂಬುವರು ಸಲ್ಲಿಸಿರುವ ಅರ್ಜಿಯಲ್ಲಿ ತನ್ನನ್ನೂ ಪ್ರತಿವಾದಿಯಾಗಿಸಬೇಕು ಎಂದು ಕೋರಿ ಯುವತಿ ಅರ್ಜಿ ಸಲ್ಲಿಸಿದ್ದಾಳೆ. ಯುವತಿ ಪರವಾಗಿ ಪದ್ಮಶ್ರೀ ಪುರಸ್ಕೃತ ನ್ಯಾಯವಾದಿ ಇಂದಿರಾ ಜೈಸಿಂಗ್ ವಾದ ಮಂಡಿಸಲಿದ್ದಾರೆ.
ನ್ಯಾಯವಾದಿ ಇಂದಿರಾ ಜೈಸಿಂಗ್ ಲಿಂಗ ಸಮಾನತೆ, ಮಾನವ ಹಕ್ಕುಗಳ ಕುರಿತಂತೆ ಹೋರಾಟ ನಡೆಸುತ್ತಿದ್ದು, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಈ ನಿಟ್ಟಿನಲ್ಲಿ ಇವರ ಸೇವೆ ಗುರುತಿಸಿ 2005 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 2018 ರಲ್ಲಿ ಫಾರ್ಚ್ಯೂನ್ ಮ್ಯಾಗ್ಸಿನ್ ಪ್ರಕಟಿಸಿದ ವಿಶ್ವದ 50 ಪ್ರಭಾವಿ ನಾಯಕರ ಪಟ್ಟಿಯಲ್ಲಿ ಇಂದಿರಾ ಜೈಸಿಂಗ್ ಕೂಡ ಒಬ್ಬರಾಗಿದ್ದಾರೆ. ಹೆಚ್ಚುವರಿ ಸಾಲಿಸಿಟರ್ ಜನರಲ್ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳಾ ನ್ಯಾಯವಾದಿಯೂ ಆಗಿದ್ದಾರೆ.