ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ಸಿದ್ದಪಡಿಸಿರುವ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಲು ನಿರಾಕರಿಸಿರುವ ಹೈಕೋರ್ಟ್, ವಿಚಾರಣೆಯನ್ನು ಅ.7ಕ್ಕೆ ಮುಂದೂಡಿದೆ.
ಸಿಡಿ ಪ್ರಕರಣವನ್ನು ತನಿಖೆ ಮಾಡಲು ಎಸ್‌ಐಟಿ ರಚಿಸಿದ ಕ್ರಮ ಪ್ರಶ್ನಿಸಿ ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಪ್ರತ್ಯೇಕವಾಗಿ ಸಲ್ಲಿಸಿರುವ ಪಿಐಎಲ್‌ಗಳು ಹಾಗೂ ಪ್ರಕರಣದಲ್ಲಿ ತಮ್ಮ ವಾದವನ್ನೂ ಆಲಿಸಬೇಕು ಎಂದು ಕೋರಿ ಯುವತಿ ಸಲ್ಲಿಸಿರುವ ಮಧ್ಯಂತರ ಅರ್ಜಿಯನ್ನು ಹಂಗಾಮಿ ಸಿಜೆ ಎಸ್.ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿ, ಹೈಕೋರ್ಟ್ ಅನುಮತಿ ಇಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನಡೆಸಿರುವ ತನಿಖೆಯ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ.
ಹೀಗಾಗಿ, ಹೈಕೋರ್ಟ್‌ನ ಮುಂದಿನ ಆದೇಶಕ್ಕೆ ಒಳಪಟ್ಟು ತನಿಖಾ ವರದಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಲು ಅನುಮತಿ ನೀಡಬೇಕು. ಈ ಸಂಬಂಧ ನ್ಯಾಯಾಲಯ ಹಿಂದೆ ಹೊರಡಿಸಿರುವ ಮಧ್ಯಂತರ ಆದೇಶ ತೆರೆವುಗೊಳಿಸಬೇಕು ಎಂದು ಮನವಿ ಮಾಡಿದರು.
ಎಜಿ ವಾದಕ್ಕೆ ಆಕ್ಷೇಪಿಸಿದ ಯುವತಿ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಎಸ್‌ಐಟಿ ರಚನೆಯ ಸಿಂಧುತ್ವವನ್ನೇ ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಒಂದು ವೇಳೆ ನ್ಯಾಯಾಲಯ ಎಸ್‌ಐಟಿ ರಚನೆಯನ್ನೇ ಅಸಿಂಧುಗೊಳಿಸಿದರೆ, ಎಲ್ಲವೂ ನಿರರ್ಥಕವಾಗಲಿದೆ.
ಆದ್ದರಿಂದ ಎಸ್‌ಐಟಿ ರಚನೆಯ ಕಾನೂನಾತ್ಮಕ ಮತ್ತು ಸಾಂವಿಧಾನಿಕ ಸಿಂಧುತ್ವವನ್ನು ನಿರ್ಧಾರ ಮಾಡಬೇಕಿದೆ. ಹಾಗೆಯೇ, ಎಸ್ಐಟಿ ಮುಖ್ಯಸ್ಥರು ತನಿಖೆ ವೇಳೆ ರಜೆಯಲ್ಲಿದ್ದರು. ವರದಿ ಪರಿಶೀಲಿಸಲು ನಿರಾಕರಿಸಿದ್ದಾರೆ. ಹೀಗಾಗಿ, ಎಸ್ಐಟಿ ಮುಖ್ಯಸ್ಥರ ಗೈರಿನಲ್ಲಿ ತನಿಖೆ ಮುಂದುವರೆಯಬಹುದೇ ಎಂಬುದನ್ನೂ ಪರಿಶೀಲಿಸಬೇಕಿದೆ ಎಂದರು.
ಅಲ್ಲದೇ, ಅಂದಿನ ಗೃಹ ಸಚಿವರಾಗಿದ್ದ ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ತಮಗೆ ವರದಿ ಸಲ್ಲಿಸುವ ಸಂಬಂಧ ಎಸ್‌ಐಟಿ ರಚಿಸಲು ಆದೇಶಿಸಿದ್ದರು. ಗೃಹ ಸಚಿವರು ತಮಗೆ ವರದಿ ಸಲ್ಲಿಸುವಂತೆ ಆದೇಶ ಮಾಡಿರುವಾಗ ಆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬಹುದೇ? ಹೀಗಾಗಿ, ವಿಚಾರಣಾ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ನೀಡಿ ಎಂದು ಕೋರುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿದರು.
ವಾದ-ಪ್ರತಿವಾದಗಳನ್ನು ಆಲಿಸಿದ ಪೀಠ, ವಿಚಾರಣಾ ನ್ಯಾಯಾಲಯದಲ್ಲಿ ವರದಿ ಸಲ್ಲಿಸಲು ಅನುಮತಿ ನೀಡುವ ಮುನ್ನ ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ವಿಚಾರಣೆಯನ್ನು ಅ.7ಕ್ಕೆ ಮುಂದೂಡಿತು.