ಬೆಂಗಳೂರು: ಸದನದಲ್ಲಿ ಎರಡನೇ ದಿನವೂ ಮಾಜಿ ಸಚಿವ ರಮೇಶ್ ಜಾರಕಿಕೊಳಿ ಅವರ ಸಿಡಿ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಇಂದು ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಸಿಡಿ ವಿಚಾರವಾಗಿ ಬಾವಿಗಿಳಿದು ಪ್ರತಿಭಟಿಸಿದರು.
ಸದನಕ್ಕೆ ಕೈಯಲ್ಲಿ ಸಿಡಿಗಳನ್ನು ಹಿಡಿದೇ ಆಗಮಿಸಿದ ಕೈ ನಾಯಕರು, ಸದನದ ಬಾವಿಗಿಳಿದು ಪ್ರತಿಭಟಿಸಿದರು. ಕಲಾಪದಲ್ಲಿ ಸಿಡಿ ಪ್ರದರ್ಶಿಸಿ ಆಕ್ರೋಶ ಹೊರಹಾಕಿದರು.
‘ಸಿಡಿ ಸರ್ಕಾರಕ್ಕೆ ಧಿಕ್ಕಾರ’ ಎಂದು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಪ್ರಶ್ನೋತ್ತರ ವೇಳೆ ನಡೆಸಲು ಅವಕಾಶ ನೀಡುವಂತೆ ಸ್ಪೀಕರ್ ಮನವಿ ಮಾಡಿದರು. ಆದರೆ ಇದಕ್ಕೆ ಬಗ್ಗದ ಪ್ರತಿಪಕ್ಷದ ಸದಸ್ಯರು ಇದು ಸಿಡಿ ಸರ್ಕಾರವೆಂದು ಕೂಗಿ ಪ್ರತಿಭಟಿಸಿದರು.
ಇದೇ ವೇಳೆ ‘ಶಾಸಕರ ಮಾನ ಹರಾಜು ಮಾಡುವ ಸಿಡಿ ಫ್ಯಾಕ್ಟರಿ ಆಗಿರುವ ಕಾಂಗ್ರೆಸ್ ಪಕ್ಷ’ ಎಂದು ಬಿಜೆಪಿಯ ಶಾಸಕರೊಬ್ಬರು ಕಿಡಿಕಾರಿದರು.
ಸ್ಪೀಕರ್ ಕಾಗೇರಿ ಅವರ ಮನವಿಗೆ ಕಾಂಗ್ರೆಸ್ ಪಕ್ಷದ ಸದಸ್ಯರು ಸ್ಪಂದಿಸದ ಕಾರಣ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡಲಾಯಿತು.
ಪೂರ್ವ ನಿಯೋಜಿತದಂತೆ ಪ್ರತಿಭಟನೆ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ನಡೆದಿದ್ದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಖಾಲಿ ಸಿಡಿ ಪ್ರದರ್ಶಿಸಿ ಕಲಾಪದಲ್ಲಿ ಧರಣಿ ನಡೆಸಲು ತೀರ್ಮಾನಿಸಲಾಗಿತ್ತು. ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನಾಯಕರಾದ ರಮೇಶ್ ಕುಮಾರ್, ದಿನೇಶ್ ಗುಂಡೂರಾವ್, ಎಂ.ಬಿ ಪಾಟೀಲ್, ಜಮೀರ್ ಅಹಮದ್, ಅಜಯ್ ಸಿಂಗ್, ಈಶ್ವರ್ ಖಂಡ್ರೆ, ಎಂ ಕೃಷ್ಣಪ್ಪ ಮತ್ತಿತರರು ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದ್ದರು.