ಬೆಂಗಳೂರು: ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಮಾಜಿ ಮೇಯರ್ ಸಂಪತ್‌ರಾಜ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಅವರ ಆರೋಗ್ಯ ಅಧ್ಯಯನಕ್ಕಾಗಿ ವೈದ್ಯರ ತಂಡ ರಚಿಸುವಂತೆ ಸಿಸಿಬಿ ಪೊಲೀಸರು ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆಗೆ ಪತ್ರ ಬರೆದಿದ್ದಾರೆ.
ಸಂಪತ್‌ರಾಜ್ ಆರೋಗ್ಯ ಸ್ಥಿತಿ ಅಧ್ಯಯನಕ್ಕೆ ವೈದ್ಯರ ತಂಡ ರಚಿಸುವಂತೆ ಸಿಸಿಬಿ ಪತ್ರ
ಡಿ.ಜೆ.ಹಳ್ಳಿ ಗಲಭೆ ಸಂಬಂಧ ಬಂಧನ ಭೀತಿ ಎದುರಿಸುತ್ತಿರುವ ಬಿಬಿಎಂಪಿ ಮಾಜಿ ಮೇಯರ್ ಸಂಪತ್‌ರಾಜ್ ಕೊರೊನಾ ಸೋಂಕು ತಗುಲಿರುವುದಾಗಿ ಹೇಳಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸಿಬಿ ಅಧಿಕಾರಿಗಳು ಮಾಜಿ ಮೇಯರ್ ಆರೋಗ್ಯ ಸ್ಥಿತಿ ಅಧ್ಯಯನಕ್ಕೆ ವೈದ್ಯರ ತಂಡ ರಚಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲಾಣ್ಯ ಇಲಾಖೆಗೆ ಪತ್ರದ ಮುಖೇನ ಕೋರಿದ್ದಾರೆ.
ಗಲಭೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಾಜಿ ಮೇಯರ್ಗೆ ಸೆ.17 ರಂದು ಸಿಸಿಬಿ ನೋಟಿಸ್ ಜಾರಿ ಮಾಡಿತ್ತು. ಆದರೆ ಸೆ.15 ರಂದು ಕೊರೊನಾ ಸೋಂಕು ಬಂದಿರುವುದಾಗಿ ಹೇಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಲವು ಬಾರಿ ಆಸ್ಪತ್ರೆಯ ವೈದ್ಯರಿಗೆ ಸಂಪತ್ ರಾಜ್ ಅವರ ವೈದ್ಯಕೀಯ ವಿವರ ನೀಡುವಂತೆ ಸಿಸಿಬಿ ಅಧಿಕಾರಿಗಳು ಹೇಳಿದ್ದರು. ಆದರೆ ನೀಡಿದ ವರದಿ ಸಮ್ಮತವಾಗಿರದ ಕಾರಣ ಮಾಜಿ ಮೇಯರ್ ಸಂಪತ್ಗೆ ನಿಜಕ್ಕೂ ಕೊರೊನಾ ಸೋಂಕು ತಗುಲಿದೆಯೇ ಅಥವಾ ಅವರ ಆರೋಗ್ಯದಲ್ಲಿ ಬೇರೆ ಏನಾದರೂ ಸಮಸ್ಯೆ ಇದೆಯೇ ಎಂಬುದು ತಿಳಿಯಬೇಕಿದೆ. ಆದ್ದರಿಂದ ಇದರ ಬಗ್ಗೆ ತಜ್ಞರಿಂದ ವರದಿ ದೊರೆಯಬೇಕು ಎಂದು ಸಿಸಿಬಿ ಪತ್ರ ಬರೆದಿದೆ.
ಈ ಗಲಭೆಗೆ ಸಂಪತ್ ರಾಜ್ ಪ್ರಮುಖ ರೂವಾರಿಯಾಗಿದ್ದು, ರಾಜಕೀಯ ದ್ವೇಷದಿಂದ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡಲಾಗಿದೆ ಎಂದು ಈಗಾಗಲೇ ಸಿಸಿಬಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.