ಬೆಂಗಳೂರು:ಬೆಂಗಳೂರಿನ ಡ್ರಗ್ಸ್ ಜಾಲದ ನಂಟು ಇದೀಗ ದೆಹಲಿ ತಲುಪಿದೆ. ನಗರದಲ್ಲಿ ಅವ್ಯಾಹತವಾಗಿ ಡ್ರಗ್ಸ್ ಸಂಚಾರಕ್ಕೆ ವೇದಿಕೆ ಕಲ್ಪಿಸುತ್ತಿದ್ದ ಪಕ್ಕಾ ಪಾರ್ಟಿ ಆಯೋಜಕ ವೀರೇನ್ ಖನ್ನಾನನ್ನು ಸಿಸಿಬಿ ಹೆಡೆಮುರಿಕಟ್ಟಿದೆ.
ಈತ ಬೆಂಗಳೂರಿನಲ್ಲಿ ದೊಡ್ಡ-ದೊಡ್ಡ ಪಾರ್ಟಿ ಆಯೋಜನೆ ಮಾಡ್ತಿದ್ದ. ಇದರಲ್ಲಿ ಬಹುತೇಕ ನಟ-ನಟಿಯರು, ಮಾಡೆಲ್ಗಳು ಭಾಗಿಯಾಗುತ್ತಿದ್ದರು. ನಟಿಯರ ಆಪ್ತರಾದ ರವಿಶಂಕರ್ ಹಾಗೂ ರಾಹುಲ್ ಬಾಯಿಬಿಟ್ಟ ಮಾಹಿತಿಯಿಂದ ಈತನನ್ನು ವಿಚಾರಣೆಗೊಳಪಡಿಸಲಿದ್ದಾರೆ. ವೀರೇನ್ ಖನ್ನಾರವರ ಇಂದಿನ ವಿಚಾರಣೆಯಿಂದ ಹಲವು ಮಾಹಿತಿಗಳು ಹೊರಬರಲಿವೆ.
ಈಗಾಗಲೇ ಸಿಸಿಬಿ ಬಂಧಿಸಿರುವ ರವಿಶಂಕರ್, ರಾಹುಲ್, ಸ್ಯಾಂಡಲ್ವುಡ್ನ ಸ್ಟಾರ್ ನಟಿ ರಾಗಿಣಿ ದ್ವಿವೇದಿ ಜೊತೆಗೆ ದೆಹಲಿ ಮೂಲದ ಖನ್ನಾ ಹೊಸ ಸೇರ್ಪಡೆಯಾಗಿದ್ದಾನೆ. ದೆಹಲಿಗೆ ತೆರಳಿದ್ದ ಸಿಸಿಬಿ ಇನ್ಸ್ಪೆಕ್ಟರ್ಗಳಾದ ಶ್ರೀಧರ್ ಹಾಗೂ ಲಕ್ಷ್ಮಿಕಾಂತ್ ನೇತೃತ್ವದ ತಂಡ ವೀರೇನ್ ಖನ್ನಾನನ್ನು ಬಂಧಿಸಿ 4 ದಿನಗಳ ಕಾಲ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ದೆಹಲಿ ಮೂಲದ ವೀರೇನ್ ಖನ್ನಾ ಪಕ್ಕಾ ಪಾರ್ಟಿ ಶೋಕಿಲಾಲ ಅನ್ನೋದನ್ನು ಆತನ ಸಾಮಾಜಿಕ ಜಾಲತಾಣಗಳ ಫೋಟೋಗಳು ಹಾಗೂ ತನಿಖೆಯಲ್ಲಿ ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ವೀರೇನ್ಗೆ ಇಲ್ಲಿಂದಲೇ ನಗರದ ಪ್ರಭಾವಿಗಳ ಮಕ್ಕಳು, ಸಿನಿ ತಾರೆಯರ ಸಂಪರ್ಕ ಸಿಕ್ಕಿತ್ತು. ಪಕ್ಕಾ ಪಾರ್ಟಿ ಶೋಕಿ ಇದ್ದ ವೀರೇನ್ ದೇಶದ ನಾನಾ ಭಾಗಗಳಲ್ಲಿ ಆಯೋಜಿಸುವ ಪಾರ್ಟಿಗಳಲ್ಲಿ ಸಿನಿ ತಾರೆಯರು, ಉದ್ಯಮಿಗಳು, ರಾಜಕೀಯ ನಾಯಕರ ಮಕ್ಕಳ ಬಳಿ ಸ್ನೇಹ ಬೆಳೆಸಿದ್ದ. ಅದ್ರಲ್ಲೂ ಬೆಂಗಳೂರಿನಲ್ಲಿ ವೀರೇನ್ ಆಯೋಜಿಸುತ್ತಿದ್ದ ಪಾರ್ಟಿಗಳಿಗೆ ಬರವೇ ಇರಲಿಲ್ಲ. ಆದ್ರೆ ಬಹುತೇಕ ಈ ಎಲ್ಲಾ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ವಿಚಾರ ಸಾಮಾನ್ಯವಾಗಿತ್ತು. ಸದ್ಯ ಈತ ಬಾಯಿಬಿಡುವ ಹಲವು ಮಾಹಿತಿಯಿಂದ ಬಹಳಷ್ಟು ನಟಿಯರಿಗೆ ಸಂಕಷ್ಟ ಶುರುವಾಗಿದೆ. ಖುದ್ದಾಗಿ ಡಿಸಿಪಿ ರವಿ ಕುಮಾರ್ ಅವರು ತನಿಖೆಯನ್ನು ನಡೆಸಿ ಬಹಳಷ್ಟು ಮಾಹಿತಿ ಕಲೆ ಹಾಕಲಿದ್ದಾರೆ.