ಬೆಂಗಳೂರು: ಗುತ್ತಿಗೆದಾರನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದ ಆರೋಪದಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಾಜಿ ಕಾರ್ಪೊರೇಟರ್ ಜಿ ಕೆ ವೆಂಕಟೇಶ್ ಅವರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಯಶವಂತಪುರ ವಾರ್ಡ್ಗೆ ಸಂಬಂಧಿಸಿದ ಕಾಮಗಾರಿಯನ್ನು ಗುತ್ತಿಗೆದಾರ ಚಂದ್ರು ಎಂಬುವರು ಪಡೆದಿದ್ದರು. ಚಂದ್ರುಗೆ ಗುತ್ತಿಗೆ ಸಿಕ್ಕ ಹಿನ್ನೆಲೆ ಅಸಮಾಧಾನಗೊಂಡಿದ್ದ ವೆಂಕಟೇಶ್, ನಿನ್ನಿಂದ ಕೈ ತಪ್ಪಿರುವ ಗುತ್ತಿಗೆ ಹಣವನ್ನು ಭರಿಸುವಂತೆ ಬೆದರಿಕೆ ಒಡ್ಡಿದ್ದಾರೆ. ಇದಕ್ಕೆ ಚಂದ್ರು ಕಿವಿಗೊಡದಿದ್ದಾಗ ಅ.18 ರಂದು ಸಹಚರರ ಜೊತೆ ಸೇರಿಕೊಂಡು ಚಂದ್ರುನನ್ನು ಅಪಹರಿಸಿ 3 ಕೋಟಿ ರೂ.ಗೆ ಬೇಡಿಕೆಯಿಟ್ಟಿದ್ದರು. ಬಳಿಕ, 3 ಕೋಟಿ ರೂ. ಚೆಕ್ ಪಡೆದು ಹಲ್ಲೆ ಮಾಡಿ, ಚಂದ್ರನನ್ನು ಬಿಡುಗಡೆ ಮಾಡಿದ್ದರು. ಈ ಕುರಿತು ಯಶವಂತಪುರ ಪೊಲೀಸ್ ಠಾಣೆಯಲ್ಲಿ ಗುತ್ತಿಗೆದಾರ ಚಂದ್ರು ದೂರು ನೀಡಿದ್ದರು. ಬಳಿಕ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು. ಸದ್ಯಕ್ಕೆ ಜಿ.ಕೆ.ವೆಂಕಟೇಶ್ ಅವರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ :ಎನ್ಒಸಿ ನೀಡಲು ಲಂಚ : ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಸಿಬಿಐ ಬಲೆಗೆ
ಇತರೆ ಹಳೇ ಪ್ರಕರಣಗಳು.. ಇನ್ನು ಮನೆಗೆ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ನೀಡಲು ಲಂಚ ಕೇಳಿದ ಪುರಾತತ್ವ ಇಲಾಖೆಯ ಮೂವರು ಅಧಿಕಾರಿಗಳು ಕೇಂದ್ರ ತನಿಖಾ ದಳದ (ಸಿಬಿಐ) ಬಲೆಗೆ ಬಿದ್ದಿದ್ದ ಘಟನೆ ಕಳೆದ ಫೆಬ್ರವರಿ ತಿಂಗಳಲ್ಲಿ ನಡೆದಿತ್ತು. ಬಳ್ಳಾರಿಯಲ್ಲಿ ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಪ್ರಶಾಂತ್ ರೆಡ್ಡಿ, ಯೋಗೀಶ್, ಮೊಹಮದ್ ಗೌಸ್ ಎಂಬುವರನ್ನು ಬಂಧಿಸಿದ್ದರು.
ಸಾಮಾಜಿಕ ಹೋರಾಟಗಾರ ರಾಜಶೇಖರ ಮುಲಾಲಿ ಎಂಬವರು ಈ ಕುರಿತು ಸಿಬಿಐಗೆ ದೂರು ನೀಡಿದ್ದರು. ಖಾಸಗಿ ಹೋಟೆಲ್ನಲ್ಲಿ ಲಂಚದ ಹಣವನ್ನು ಮುಂಗಡವಾಗಿ ನೀಡುತ್ತಿದ್ದಾಗ ಸಿಬಿಐ ತಂಡ ದಾಳಿ ನಡೆಸಿತ್ತು. ರಾಜಶೇಖರ ಮುಲಾಲಿ ನಗರದ ಕೋಟೆ ಪ್ರದೇಶದಲ್ಲಿ ಮನೆ ಕಟ್ಟಲು ಮುಂದಾಗಿದ್ದು, ಪುರಾತತ್ವ ಇಲಾಖೆಯಿಂದ ಎನ್‌ಒಸಿ ನೀಡಲು ಅರ್ಜಿ ಸಲ್ಲಿಸಿದ್ದರು. ಈ ವೇಳೆ ಒಂದೂವರೆ ಲಕ್ಷ ಹಣ ನೀಡುವಂತೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಅವರು ಸಿಬಿಐಗೆ ದೂರು ನೀಡಿದ್ದರು. ಅದರಂತೆ ಖಾಸಗಿ ಹೋಟೆಲ್ನಲ್ಲಿ 50 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದಾಗ ಸಿಬಿಐ ತಂಡ ಕಾರ್ಯಾಚರಣೆ ನಡೆಸಿದೆ. ಬಂಧಿತರ ಮನೆ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿತ್ತು.
ಇದನ್ನೂ ಓದಿ :NWKRTCಯ ಚಾಲಕ ತರಬೇತಿಯಲ್ಲಿ ಲಂಚದ ಆರೋಪ : ತನಿಖೆಗೆ ಆದೇಶಿಸಿದ ಎಂಡಿ