ಕರ್ನಾಟಕ

karnataka

ETV Bharat / state

'ದುಬಾರಿ' ಗ್ಯಾಂಗ್ ಅರೆಸ್ಟ್ : 3 ಕೋಟಿ ಮೌಲ್ಯದ 19 ಕಾರು ಜಪ್ತಿ ಮಾಡಿಕೊಂಡ ಸಿಸಿಬಿ - ದುಬಾರಿ ಕಾರುಗಳ ಮಾಲೀಕರಿಗೆ ವಂಚನೆ

ಆರೋಪಿಗಳ ವಿರುದ್ಧ ಜ್ಞಾನಭಾರತಿ, ಪುಲಿಕೇಶಿನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಸಿಸಿಬಿಯ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ..

gang
ಗ್ಯಾಂಗ್ ಅರೆಸ್ಟ್

By

Published : Jul 14, 2021, 7:05 PM IST

ಬೆಂಗಳೂರು :ಕೋವಿಡ್ ಮಹಾಮಾರಿ ಮನುಕುಲದ ಮೇಲೆ ನೀಡಿರುವ ಪೆಟ್ಟಿನಿಂದ ಅದೆಷ್ಟೋ ಉದ್ಯಮಗಳು ನೆಲಕಚ್ಚಿವೆ.‌ ಎಲ್ಲ ಇದ್ದಂತಿರುವವರೇ ಪರದಾಡಿದ ನಿದರ್ಶನಗಳು ಕಣ್ಮುಂದಿವೆ. ಇಂತಹ ಕಠಿಣ ಸಂದರ್ಭದಲ್ಲಿ ಕಾರು ಮಾಲೀಕರನ್ನು ಯಾಮಾರಿಸಿ ವಂಚಿಸಿದ್ದ ಮೂವರು ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕೋವಿಡ್ ಕಾಲದಲ್ಲಿ ಆರ್ಥಿಕ ಸಂಕಷ್ಟದಿಂದ ಅಡಮಾನವಿಡುವ ಹಾಗೂ ಮಾರಾಟ ಮಾಡುವ ಮಾಲೀಕರ ಕಾರುಗಳನ್ನ ನಂಬಿಸಿ ಪಡೆದು ವಂಚಿಸುತ್ತಿದ್ದ ನಸೀಬ್, ಮಹಮ್ಮದ್ ಅಜಂ ಹಾಗೂ‌ ಮಹೀರ್ ಖಾನ್ ಎಂಬುವರನ್ನು ಸಿಸಿಬಿಯ ಸಂಘಟಿತ ಅಪರಾಧ ದಳ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ. ಇವರಿಂದ 3 ಕೋಟಿ ಮೌಲ್ಯದ 19 ದುಬಾರಿ ಬೆಲೆಯ ಕಾರುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಸಿಸಿಬಿ‌ ಜಂಟಿ‌ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ

ಆರ್ಥಿಕ ಸಂಕಷ್ಟದಿಂದ ಅಥವಾ ತುರ್ತು ಹಣದ ಅವಶ್ಯಕತೆ ಇರುವವರಿಂದ ಹಾಗೂ ಕಾರನ್ನ ಮಾರಾಟ ಮಾಡಲು ಬಯಸುವವರಿಂದ ದಾಖಲಾತಿಗಳ ಸಹಿತ ಕಾರನ್ನ ಅಡಮಾನ ಇರಿಸಿಕೊಂಡು ಸ್ವಲ್ಪ ಹಣ ನೀಡುತ್ತಿದ್ದ ಆರೋಪಿಗಳು ಅದೇ ಕಾರುಗಳನ್ನ ಇತರರಿಗೆ ಮಾರಾಟ ಮಾಡುತ್ತಿದ್ದರು.

ಕಾರಿನ ಬೆಲೆಗಿಂತ ಕಡಿಮೆ ಪ್ರಮಾಣದ ಹಣವನ್ನು ಒಂದು ಕಂತಿನಲ್ಲಿ ನೀಡಿ ನಂಬಿಕೆ ಗಿಟ್ಟಿಸಿಕೊಳ್ಳುತ್ತಿದ್ದ ಆರೋಪಿಗಳು, ದಾಖಲಾತಿಗಳ ಸಮೇತ ಸುಲಭವಾಗಿ ಕಾರನ್ನ ತಮ್ಮ ಸುಪರ್ದಿಗೆ ಪಡೆಯುತ್ತಿದ್ದರು. ಬಳಿಕ ಮಾಲೀಕರ ಅನುಮತಿಯಿಲ್ಲದೇ ಬೇರೆಯವರಿಗೆ ಹೆಚ್ಚಿನ ಹಣಕ್ಕೆ ಮಾರಾಟ ಮಾಡುತ್ತಿದ್ದರು.

ಇದೇ ರೀತಿ ಭಟ್ಕಳ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಕಡೆಗಳಲ್ಲಿ ಮಾರಾಟ ಮಾಡಿದ್ದರು. ಆರೋಪಿಗಳು ಚಿತ್ರದುರ್ಗದ ಕ್ಷೇತ್ರವೊಂದರ ಮುಂದಿನ ಜೆಡಿಎಸ್ ಎಂಎಲ್ಎ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದ ವ್ಯಕ್ತಿಯೊಬ್ಬನಿಗೂ ಕಾರನ್ನ ಮಾರಾಟ ಮಾಡಿರುವುದು ಸಹ ತನಿಖೆ ವೇಳೆ ಬಯಲಾಗಿದೆ.

ಆರೋಪಿಗಳ ವಿರುದ್ಧ ಜ್ಞಾನಭಾರತಿ, ಪುಲಿಕೇಶಿನಗರ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಪ್ರಕರಣಗಳು ದಾಖಲಾಗಿದ್ದವು. ಸದ್ಯ ಸಿಸಿಬಿಯ ಎಸಿಪಿ ಪರಮೇಶ್ವರ್ ನೇತೃತ್ವದ ತಂಡ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ ಎಂದು ಸಿಸಿಬಿ‌ ಜಂಟಿ‌ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details