ಬೆಂಗಳೂರು :ದೇಶಾದ್ಯಂತ ನೂರಾರು ಶಾಖೆ ಹೊಂದಿರುವ ಹಾಗೂ ಸ್ಟಾಕ್ ಎಕ್ಸ್‌ಚೇಂಜ್ ಹೆಸರಲ್ಲಿ ಜನರಿಂದ ಹೂಡಿಕೆ ಮಾಡಿಸಿಕೊಂಡು ನೂರಾರು ಕೋಟಿ ವಂಚನೆ ಸಂಬಂಧ ತೆಲಂಗಾಣ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಕಾರ್ವಿ ಟ್ರೇಡಿಂಗ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಮೂವರು ಆರೋಪಿಗಳನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಎಂಡಿ ಪಾರ್ಥ ಸಾರಥಿ, ಸಿಇಒ ಕೃಷ್ಣಹರಿ ಸೇರಿ ಮೂವರನ್ನು ಹೈದರಾಬಾದ್ ಜೈಲಿನಲ್ಲಿದ್ದವರನ್ನು ಬಾಡಿ ವಾರೆಂಟ್ ಮೇಲೆ ಸಿಸಿಬಿ ಪೊಲೀಸರು 13 ದಿನಗಳ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ನಾಳೆಗೆ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದೆ.
ಸಾರ್ವಜನಿಕರ ಶೇರುಗಳನ್ನ ಗಮನಕ್ಕೆ ತರದೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಲೋನ್ ಪಡೆದು ವಂಚಿಸಿರುವ ಆರೋಪ ಕಾರ್ವಿ ಟ್ರೇಡಿಂಗ್ ಕಂಪನಿ ವಿರುದ್ಧ ಕೇಳಿ ಬಂದಿತ್ತು. ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿಯ ಮುಖ್ಯ ಕಚೇರಿ ಹೈದರಾಬಾದ್‌ನಲ್ಲಿದ್ದರೆ, ಬೆಂಗಳೂರಲ್ಲೂ 10ಕ್ಕೂ ಹೆಚ್ಚು ಬ್ರಾಂಚ್ ಆಫೀಸ್‌ಗಳನ್ನ ಹೊಂದಿದೆ. ದೇಶವ್ಯಾಪಿ 250ಕ್ಕೂ ಹೆಚ್ಚು ಶಾಖೆಗಳನ್ನ ಕಾರ್ವಿ ಸ್ಟಾಕ್ ಟ್ರೇಡಿಂಗ್ ಕಂಪನಿ ಹೊಂದಿದೆ.
ನಗರದಲ್ಲಿ ಸುಮಾರು 200 ಕೋಟಿಗೂ ಅಧಿಕ ಹಣವನ್ನ ಕಾರ್ವಿ ಟ್ರೇಡಿಂಗ್ ಕಂಪನಿ ವಂಚಿಸಿರುವ ಆರೋಪ ಕೇಳಿ ಬಂದಿತ್ತು. ಬಳ್ಳಾರಿ ಮೂಲದ ಉದ್ಯಮಿಗೆ ವಂಚನೆ ಮಾಡಿರುವ ಸಂಬಂಧ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬೆಂಗಳೂರು ಕಾರ್ವಿ ಟ್ರೇಡಿಂಗ್ ಕಂಪನಿಯ ಮ್ಯಾನೇಜರ್ ವಿಜಯೇಂದ್ರ ಎಂಬಾತನನ್ನು ಬಂಧಿಸಿದ್ದರು.
ಆರೋಪಿ ವಿಜಯೇಂದ್ರ ನೀಡಿದ ಮಾಹಿತಿ ಆಧರಿಸಿ ಮೂವರನ್ನು ವಿಚಾರಣೆ ನಡೆಸಿರುವ ಸಿಸಿಬಿಯ ಸಂಘಟಿತ ಅಪರಾಧ ವಿಭಾಗ ಡಿಸಿಪಿ ಧರ್ಮೇಂದ್ರ, 250 ಕೋಟಿಗಿಂತ ಹೆಚ್ಚು ಹಣ ವಂಚನೆ ಮಾಡಿರುವುದು ಮೇಲ್ನೊಟಕ್ಕೆ ಸಾಬೀತಾಗಿದೆ.