ಬೆಂಗಳೂರು:ಮೊಘಲರ ಕಾಲದ ಚಿತ್ರಿಕೆ ಇರುವ ಪುರಾತನ ಕಾಲದ, ಆನೆದಂತದಿಂದ ಮಾಡಿರುವ ವಿವಿಧ ಶೈಲಿಯ ಬೆಲೆಬಾಳುವ ವಸ್ತುಗಳ ಮಾರಾಟಕ್ಕೆ ಯತ್ನಿಸುವಾಗ ಅನ್ಯ ರಾಜ್ಯದ ಇಬ್ಬರು ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಹರಿಯಾಣ ಹಾಗೂ ಪಂಜಾಬ್ ಮೂಲದ ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್, ಸ್ಥಳೀಯ ಆರೋಪಿಗಳಾದ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್, ಮೊಹಮ್ಮದ್ ಇಸ್ರಾರ್ ಹಾಗೂ ಆಮ್ಜದ್ ಪಾಷಾ ಬಂಧಿತರು.
ಆನೆದಂತದಿಂದ ಮಾಡಿರುವ ಚೌಕಾಕಾರದ ಬಾಕ್ಸ್ 533 ಗ್ರಾಂ, ಹಿಡಿಕೆಯಿರುವ ಚಾಕು, ಬಾಗಿಲ ಹಿಡಿಕೆ, ಆನೆಯ ಮೂರ್ತಿಯ ವಾಕಿಂಗ್ ಸ್ಟಿಕ್, ಮೊಟ್ಟೆ ಆಕಾರದ 20 ಏರಾಟಿಕ್ ವರ್ಕ್ಸ್ (ಕಾಮಸೂತ್ರ ವಾತ್ಸಾಯನ) ಸೇರಿದಂತೆ ಒಟ್ಟು ಏಳೂವರೆ ಕೆ.ಜಿ. ತೂಕದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.