ಬೆಂಗಳೂರು :ತಲೆ ಮರೆಸಿಕೊಂಡಿರುವ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ನನ್ನು ಬಂಧಿಸುವುದೇ ಸಿಸಿಬಿ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ.
ಸಂಪತ್ ರಾಜ್ ಬಂಧಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಿ. ಮುಂದಿನ ವಿಚಾರಣೆ ವೇಳೆ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿ ಸಲ್ಲಿಸಿ ಎಂದು ಇತ್ತೀಚೆಗೆ ಹೈಕೋರ್ಟ್ ನಿರ್ದೇಶನ ನೀಡಿರುವುದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಅಧಿಕಾರಿಗಳು ಎಷ್ಟೇ ಹುಡುಕಿದರೂ ಆರೋಪಿ ಮಾತ್ರ ಪತ್ತೆಯಾಗುತ್ತಿಲ್ಲ. ಹೈಕೋರ್ಟ್ಗೆ ವರದಿ ಸಲ್ಲಿಸಬೇಕಾಗಿರುವುದರಿಂದ, ಆರೋಪಿಯನ್ನು ತ್ವರಿತವಾಗಿ ಹುಡುಕಲೇಬೇಕಾದ ಅನಿವಾರ್ಯತೆ ಪೊಲೀಸರಿಗೆ ಎದುರಾಗಿದೆ.
ಒಂದು ವೇಳೆ ಸಂಪತ್ರಾಜ್ ಸಿಗದೇ ಹೋದರೆ, ಆತನನ್ನು ಬಂಧಿಸಲು ಹೇಗೆಲ್ಲ ಹಡುಕಾಟ ನಡೆಸಲಾಗಿದೆ. ಎಷ್ಟು ತಂಡಗಳಾಗಿ ಹುಡುಕಾಟ ನಡೆಸಲಾಗಿದೆ ಎಂಬುವುದರ ಬಗ್ಗೆ ಸಿಸಿಬಿ ಪೊಲೀಸರು ಹೈಕೋರ್ಟ್ಗೆ ವರದಿ ಸಲ್ಲಿಸಬೇಕಾಗುತ್ತದೆ. ಆದರೆ, ಈ ಮಾಹಿತಿಗಳನ್ನು ಈಗಾಗಲೇ ಹೈಕೋರ್ಟ್ ಗಮನಕ್ಕೆ ತಂದಿರುವುದರಿಂದ, ಮತ್ತೆ ಅದನ್ನೇ ಕೊಟ್ಟರೆ ಸಮಸ್ಯೆಯಾಗಲಿದೆ. ಹೀಗಾಗಿ, ಸಂಪತ್ ರಾಜ್ ಬಂಧನ ಬಿಟ್ಟರೆ ಅಧಿಕಾರಿಗಳಿಗೆ ಬೇರೆ ದಾರಿಯಿಲ್ಲ.
ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಗಲಭೆಯ ನಷ್ಟ ಅಂದಾಜು ಮಾಡಿ ಹೊಣೆಗಾರಿಕೆ ನಿಗದಿಪಡಿಸಲು, ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಲು ಕೋರಿ 4 ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದವು. ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಿತ್ತು.
ಈ ವೇಳೆ ಪ್ರಕರಣದ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ತಲೆಮರೆಸಿಕೊಂಡಿರುವ ವಿಚಾರವನ್ನು ಸರ್ಕಾರಿ ವಕೀಲರು ಪೀಠದ ಗಮನಕ್ಕೆ ತಂದಿದ್ದರು. ಹಾಗೆಯೇ ವಿಚಾರಣಾ ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿರುವ ಬಗ್ಗೆಯೂ ತಿಳಿಸಿದ್ದರು. ಈ ಹೇಳಿಕೆ ದಾಖಲಿಸಿಕೊಂಡ ಪೀಠ, ಆರೋಪಿ ಸಂಪತ್ ರಾಜ್ನನ್ನು ಬಂಧಿಸಲು ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ಜರುಗಿಸುವಂತೆ ಪೊಲೀಸರಿಗೆ ನಿರ್ದೇಶಿಸಿತ್ತು. ಅಲ್ಲದೆ ಮುಂದಿನ ವಿಚಾರಣೆ ವೇಳೆ ತನಿಖಾ ಪ್ರಗತಿ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸೂಚಿಸಿತ್ತು.