ಬೆಂಗಳೂರು: ನಗರದ ವಿವಿಧೆಡೆ ಮೀಟರ್ ಬಡ್ಡಿ ದಂಧೆ ನಡೆಸುತಿದ್ದವರ ಮೇಲೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿದ್ದಾರೆ. ಸಿಸಿಬಿ ಪೊಲೀಸರು, ಜಿಲ್ಲಾ ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಲೇವಾದೇವಿ ನಿಬಂಧಕ ಅಧಿಕಾರಿಗಳು ಜಂಟಿಯಾಗಿ ಬಸವನಗುಡಿ, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ, ಬಸವೇಶ್ವರ ನಗರ ಠಾಣೆ ವ್ಯಾಪ್ತಿಗಳಲ್ಲಿ ದಾಳಿ ನಡೆಸಿದ್ದು, ನಗದು ಸೇರಿದಂತೆ 42.42 ಲಕ್ಷ ಮೌಲ್ಯದ ವಸ್ತುಗಳನ್ನ ವಶಕ್ಕೆ ಪಡೆದಿದ್ದಾರೆ.
ತಕ್ಷಣ ಹಣ ಅಗತ್ಯ ಇರುವವರಿಗೆ ಹಣ ನೀಡಿ ನಂತರ ಹಿಂಸಿಸಿ ಮೀಟರ್ ಲೆಕ್ಕದಲ್ಲಿ ವಸೂಲಿ ಮಾಡುತ್ತಿದ್ದ ಆರೋಪದಡಿ ಚಾಮರಾಜಪೇಟೆಯ ವೆಂಕಟೇಶ, ಬಸವನಗುಡಿಯಲ್ಲಿ ಶೀಲಾ, ಕಾಮಾಕ್ಷಿ ಪಾಳ್ಯದ ರೌಡಿ ಆಸಾಮಿ ಜಗದೀಶ್ ಅಲಿಯಾಸ್ ಟಾಮಿ ಸೇರಿದಂತೆ ವಿವಿಧ ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಇವರ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ವೇಳೆ 23.42 ಲಕ್ಷ ನಗದು, 7 ಲಕ್ಷ ಮೌಲ್ಯದ 127 ಗ್ರಾಂ ಚಿನ್ನಾಭರಣ, 10 ಕೆ.ಜಿ. ಬೆಳ್ಳಿ, 109 ಖಾಲಿ ಚೆಕ್ಗಳು, 50 ಆನ್ ಡಿಮ್ಯಾಂಡ್ ಪ್ರಾಮಿಸರಿ ನೋಟ್ಸ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿಗಳು, 11 ಸ್ಟಾಂಪ್ ಪೇಪರ್ಸ್, 45 ಪಾಕೆಟ್ ಪುಸ್ತಕಗಳು, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚ್ಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.