ಆಕ್ರಮ ಜೂಜು ಅಡ್ಡೆ ಮೇಲೆ ಸಿಸಿಬಿ ದಾಳಿ ಬೆಂಗಳೂರು :ಚಿನ್ನದ ವ್ಯಾಪಾರಿಯ ಫ್ಲ್ಯಾಟ್ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಜಿನೇಂದ್ರ, ಮನೀಶ್, ಮುಕೇಶ್, ಲಲಿತ್, ರೋಹಿತ್ ಹಾಗೂ ಸಂಜಯ್ ಬಂಧಿತ ಆರೋಪಿಗಳು. ಜೂಜಾಟದ ಸ್ಥಳದಲ್ಲಿದ್ದ ದಾಖಲೆ ಇಲ್ಲದ ಎರಡು ಹಣದ ಬ್ಯಾಗ್ಗಳು ಪತ್ತೆಯಾಗಿದ್ದು, ಒಟ್ಟು 85 ಲಕ್ಷ ರೂ ಹಣ ಜಪ್ತಿ ಮಾಡಲಾಗಿದೆ.
ಜನವರಿ 7ರಂದು ಜೆ.ಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿರ್ಸಿ ಸರ್ಕಲ್ ಬಳಿಯಿರುವ ಪಾರ್ಕ್ ವೆಸ್ಟ್ ಅಪಾರ್ಟ್‌ಮೆಂಟಿನಲ್ಲಿರುವ ರಾಜ್ ಜೈನ್ ಎಂಬಾತನ ಫ್ಲ್ಯಾಟಿನಲ್ಲಿ ಜೂಜು ಆಟ ನಡೆಸಲಾಗುತ್ತಿತ್ತು. ಈ ಸಂದರ್ಭದಲ್ಲಿ ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳ ತಂಡ ಆಟದ ಟೇಬಲ್ ಮೇಲಿದ್ದ 1.48 ಲಕ್ಷ ಹಣ ಜಪ್ತಿ ಮಾಡಿದ್ದರು. ಅದೇ ಫ್ಲ್ಯಾಟ್ನಲ್ಲಿ ಶೋಧ ನಡೆಸಿದಾಗ 85.39 ಲಕ್ಷ ರೂ ಪತ್ತೆಯಾಗಿತ್ತು.
ಹಣದ ಬ್ಯಾಗ್ಗಳಿದ್ದ ಮನೆ ಮಾಲೀಕ ರಾಜ್ ಜೈನ್ ಪರಾರಿಯಾಗಿದ್ದಾನೆ. ಚಿನ್ನದ ವ್ಯಾಪಾರಿಯಾಗಿರುವ ರಾಜ್ ಜೈನ್ ಈ ಹಿಂದೆ ಚಿನ್ನ ಕಳವಾಗಿದೆ ಎಂದು ಸುಳ್ಳು ದೂರು ನೀಡಿದ್ದನು. ತನಿಖೆ ಕೈಗೊಂಡಾಗ ರಾಜ್ ಜೈನ್ ಕಳ್ಳಾಟ ಬಯಲಾಗಿತ್ತು.
ಇದನ್ನೂ ಓದಿ :ಚಿಕ್ಕಮಗಳೂರು: ಲೋಕಾಯುಕ್ತ ದಾಳಿ, ಬಿಇಒ ಕಚೇರಿ ಸಿಬ್ಬಂದಿ ವಶಕ್ಕೆ
ವೇಶ್ಯಾವಾಟಿಕೆ ದಂಧೆಯ ಆರೋಪಿಗಳು ಅಂದರ್:ಸೋಷಿಯಲ್ ಮಿಡಿಯಾ ಮೂಲಕ ಗ್ರಾಹಕರನ್ನು ಸೆಳೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ವಿದೇಶಿ ಮಹಿಳೆಯ ಸಹಿತ ಐವರನ್ನು ಬೆಂಗಳೂರು ಪೂರ್ವ ವಿಭಾಗದ ಬೈಯ್ಯಪ್ಪನಹಳ್ಳಿ ಹಾಗೂ ಹಲಸೂರು ಠಾಣಾ ಪೊಲೀಸರು ಬಂಧಿಸಿದ್ದಾರೆ. ಟರ್ಕಿ ಮೂಲದ ಮಹಿಳೆ ಮತ್ತು ಎಂಜಿನಿಯರ್ ಪದವೀಧರರು ಬಂಧಿತ ಆರೋಪಿಗಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೊಮ್ಮಲೂರಿನ ಖಾಸಗಿ ಹೋಟೆಲ್‌ನಲ್ಲಿ ವೇಶ್ಯಾವಾಟಿಕೆಯ ಬಗ್ಗೆ ಮಾಹಿತಿ ಆಧರಿಸಿ ಹಲಸೂರು ಠಾಣಾ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದರು. ಬಳಿಕ ಪ್ರಕರಣದ ಮುಂದಿನ ತನಿಖೆಯ ಜವಾಬ್ದಾರಿಯನ್ನು ಬೈಯ್ಯಪ್ಪನಹಳ್ಳಿ ಠಾಣಾ ಪೊಲೀಸರಿಗೆ ವಹಿಸಲಾಗಿತ್ತು. ನಂತರ ಡೇಟಿಂಗ್ ಕ್ಲಬ್ ಹೆಸರಿನ ಟೆಲಿಗ್ರಾಂ ಗ್ರೂಪ್ ನಿರ್ವಹಿಸುತ್ತಿದ್ದ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಇತರ ಆರೋಪಿಗಳ ಮಾಹಿತಿ ಗೊತ್ತಾಗಿದೆ.
ವಂಚಕರು ಅರೆಸ್ಟ್:ಕೋರಿಯರ್ ಕಂಪನಿ ಹೆಸರಲ್ಲಿ ವಂಚಿಸುತ್ತಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಖಾತೆಯಿಂದ 25.47 ಲಕ್ಷ ರೂ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೊಬೈಲ್, ಲ್ಯಾಪ್ತಾಪ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮಗನ ಶವ ಸಾಗಾಟದ ವೇಳೆ ಸಿಕ್ಕಿಬಿದ್ದ ಉದ್ಯಮಿ: ವಿಚ್ಛೇದನಕ್ಕಾಗಿ ಕಾಯುತ್ತಿದ್ದ ಮಹಿಳೆ ಎಂದ ಪೊಲೀಸರು!