ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ವೇಶ್ಯಾವಾಟಿಕೆ ದಂಧೆ ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆ ಸಿಸಿಬಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಅಡ್ಡೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ.
ರಾಮಮೂರ್ತಿ ನಗರ ಹಾಗೂ ವಿವೇಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ಮತ್ತು ಸಲೂನು ಹೆಸರಿನಲ್ಲಿ ಹೊರ ರಾಜ್ಯದಿಂದ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರೆಂದು ತಿಳಿದುಬಂದಿದೆ. ಹೀಗಾಗಿ ಸಿಸಿಬಿ ಪೊಲೀಸರು ದಾಳಿ ನಡೆಸಿ 12 ಯುವತಿಯರ ರಕ್ಷಣೆ ಮಾಡಿದ್ದಾರೆ.
ವಿವೇಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಇರುವ ಇಕೋ ಬಾಡಿ ಸ್ಪಾ ಆ್ಯಂಡ್ ಸಲೂನ್ನಲ್ಲಿ ಹೊರ ರಾಜ್ಯಗಳಿಂದ ಯುವತಿಯರನ್ನು ಕರೆಸಿ ಹಣ ಸಹಾಯ ಮಾಡುವುದಾಗಿ ನಂಬಿಸಿ ಗಿರಾಕಿಗಳಿಂದ ಮೂರು ಸಾವಿರದಿಂದ ಏಳು ಸಾವಿರದವರೆಗೆ ಹಣ ಪಡೆದು ದಂಧೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಸಲೂನ್ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಸ್ಪಾ ಮಾಲೀಕ ಸಿದ್ಧಾರ್ಥ ತಲೆಮರೆಸಿಕೊಂಡಿದ್ದಾನೆ. ಸದ್ಯ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾವ್ ಸ್ಟುಡಿಯೋ ಎಂಬ ಸಲೂನ್ ಸ್ಪಾ ಇದ್ದು, ಹೊರ ರಾಜ್ಯದ ಹುಡುಗಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎನ್ನುವ ಆರೋಪವಿದೆ. ಹೀಗಾಗಿ ಅನೂಪ್, ಜಯರಾಮ್, ನವಾಜ್ ಎಂಬುವವರನ್ನು ಬಂಧಿಸಲಾಗಿದೆ. ಇಲ್ಲಿ ಐವರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ.
ಆರೋಪಿಗಳಿಂದ ಓಪ್ಪೋ ಕಂಪೆನಿಯ ಕಪ್ಪು ಮೊಬೈಲ್, ನಗದು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.