ಬೆಂಗಳೂರು :ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸೇರಿದಂತೆ ಸಚಿವರ ಹೆಸರಿನಲ್ಲಿ ಕೆಲಸ ಮಾಡಿ ಕೊಡುವುದಾಗಿ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ ಆರೋಪ ಸಂಬಂಧ ಸಚಿವ ಶ್ರೀರಾಮಲು ಆಪ್ತ ಸಹಾಯಕನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ. ಅಲ್ಲದೆ ಮತ್ತೆ ವಿಚಾರಣೆಗೆ ಕರೆದಾಗ ಹಾಜರಾಗುವಂತೆ ಸೂಚಿಸಿದ್ದಾರೆ.
ಸಚಿವರ ಆಪ್ತ ಸಹಾಯಕ ರಾಜಣ್ಣನನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಕೇಳಿ ಬಂದಿತ್ತು. ಪ್ರಕರಣದ ದೂರುದಾರರಾಗಿರುವ ವಿಜಯೇಂದ್ರ ಟ್ವೀಟ್ ಮಾಡಿ ಸ್ಪಷ್ಟನೆಯನ್ನೂ ನೀಡಿದ್ದರು.
'ಸಾರ್ವಜನಿಕರು ಮೋಸ ಹೋಗಬಾರದೆಂಬ ಹಿತದೃಷ್ಟಿಯಿಂದ ಹಾಗೂ ನನ್ನ ವ್ಯಕ್ತಿತ್ವ ರಕ್ಷಣೆಗಾಗಿ, ಅನಿವಾರ್ಯವಾಗಿ ನೀಡಿದ ದೂರಿನ ಮೇಲೆ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ. ನನ್ನನೂ ಸೇರಿದಂತೆ ಸಾರ್ವಜನಿಕ ಕ್ಷೇತ್ರದಲ್ಲಿರುವ ಮುಖಂಡರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವ, ವಂಚಿಸುವವರ ಬಗ್ಗೆ ಸಮಾಜ ಎಚ್ಚರದಿಂದರಬೇಕೆಂದು ವಿನಂತಿಸುವೆ' ಎಂದಿದ್ದರು.
ಅದೇ ರೀತಿ ಮತ್ತೊಂದು ಟ್ವೀಟ್ ಮಾಡಿರುವ ವಿಜಯೇಂದ್ರ,'ಸಾರ್ವಜನಿಕ ಕ್ಷೇತ್ರದಲ್ಲಿರುವಾಗ ನೆರವು ಕೇಳುವವರನ್ನು ಅನುಮಾನಿಸಿ ನೋಡಲಾಗದು. ಹಾಗೆಂದು ಎಚ್ಚರ ತಪ್ಪಲಾಗದು. ಹೆಸರು ದುರುಪಯೋಗಪಡಿಸಿಕೊಂಡು ಕಳಂಕ ಹಚ್ಚುವ ವಂಚಕರಿಂದ ತುಸು ತೊಂದರೆ ಹೆಚ್ಚಾಗಿಯೇ ಬಾಧಿಸುತ್ತಿದೆ. ಇದು ವಿರೋಧಿಗಳಿಗೆ ಅಪಪ್ರಚಾರದ ಸರಕಾಗಿಯೂ ಬಳಕೆಯಾಗುತ್ತಿದೆ' ಎಂದಿದ್ದಾರೆ.