ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದ್ದಂತೆ ಕಾನೂನುಬಾಹಿರ ಚಟುವಟಿಕೆ ಎಸಗುವ ಶಂಕೆಯ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ 20 ಮಂದಿ ರೌಡಿಗಳ ಮನೆ ಮೇಲೆ ಸಿಸಿಬಿಯ ರೌಡಿ ನಿಗ್ರಹದಳ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಪೈಕಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ನಾಲ್ವರು ರೌಡಿಶೀಟರ್ಗಳನ್ನು ಬಂಧಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಸಿಬಿ ರೌಡಿ ನಿಗ್ರಹದ ದಳ ಅಧಿಕಾರಿಗಳು, ವಿವೇಕನಗರ ಠಾಣೆಯ ರೌಡಿಶೀಟರ್ಗಳಾದ ವಿಲ್ಸನ್ ಗಾರ್ಡನ್ ನಾಗನ ಸಹಚರರ ನಿರ್ಮಲ್ ಕುಮಾರ್, ನಾರಾಯಣ್, ರಾಮು, ಯಶವಂತಪುರ ಠಾಣೆ ಸೇರಿ ವಿವಿಧ ಪೊಲೀಸ್ ಠಾಣೆಯ ರೌಡಿಗಳಾದ ಕಿಟ್ಟಿ, ತಿಮ್ಮೇಶ ಸೇರಿದಂತೆ 20 ಮಂದಿ ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಕೆಲ ರೌಡಿಗಳ ಮನೆಗಳಲ್ಲಿ ಹರಿತವಾದ ಆಯುಧಗಳು, ವಿವಿಧ ದಾಖಲಾತಿ ಪತ್ರಗಳು ಸಿಕ್ಕಿವೆ. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಶಿವಾಜಿನಗರ ಪೊಲೀಸ್ ಠಾಣೆಯ ರೌಡಿ ಸಯ್ಯದ್ ನಜೀರ್, ಸಂಪಿಗೆಹಳ್ಳಿ ಠಾಣೆ ರೌಡಿ ಮಂಜುನಾಥ್, ಗಣೇಶ್ ಸೇರಿ ನಾಲ್ವರನ್ನ ಬಂಧಿಸಲಾಗಿದೆ.
ಗೂಂಡಾ ಕಾಯ್ದೆಯಡಿ ವೇಶ್ಯವಾಟಿಕೆ ಜಾಲ ಮುಂದುವರೆಸಿದ್ದ ಆರೋಪಿ ಬಂಧನ: ಮತ್ತೊಂದೆಡೆ, ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿ ಆರು ಬಾರಿ ಬಂಧಿತನಾದರೂ ಸುಧಾರಣೆಯಾಗದೆ ಜಾಮೀನು ಪಡೆದು ಹೊರಬಂದು ಮತ್ತೆ ಹಳೆ ಕಾಯಕದಲ್ಲಿ ತೊಡಗಿಸಿಕೊಂಡಿದ್ದ ದಂಧೆಕೋರನನ್ನು ಗೂಂಡಾ ಕಾಯ್ದೆಯಡಿ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.