ಬೆಂಗಳೂರು: ಅನ್ಲಾಕ್ ಬಳಿಕ ರಾಜಧಾನಿಯಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದ ನಗರ 8 ವಿಭಾಗಗಳಲ್ಲಿ ನಿನ್ನೆ ಬೆಳ್ಳಂಬೆಳ್ಳಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ನಗರ ಪೊಲೀಸರು ಸಾವಿರಾರು ರೌಡಿಶೀಟರ್ಗಳನ್ನು ವಶಕ್ಕೆ ಪಡೆದುಕೊಂಡು ಮನೆಯಲ್ಲಿದ್ದ ಮಾರಕಾಸ್ತ್ರಗಳು ಹಾಗೂ ಗಾಂಜಾ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.
ಈ ದಾಳಿಯಲ್ಲಿ ಪ್ರಮುಖ ರೌಡಿಶೀಟರ್ಗಳೇ ನಾಪತ್ತೆಯಾಗಿದ್ದಾರೆ. ನಿನ್ನೆ 2,144 ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು ದಾಳಿ ವೇಳೆ 1,548 ರೌಡಿಗಳನ್ನು ವಶಕ್ಕೆ ಪಡೆದುಕೊಂಡು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಈ ಪೈಕಿ ವಿಚಾರಣೆ ಬಳಿಕ 561 ರೌಡಿಗಳ ವಿರುದ್ದ ಕೇಸ್ ದಾಖಲು ಮಾಡಲಾಗಿತ್ತು. ಇಷ್ಟೆಲ್ಲ ಆದರೂ ದಾಳಿಯಲ್ಲಿ ಪಾತಕಲೋಕದ ಪ್ರಮುಖ ರೌಡಿಗಳೇ ಪೊಲೀಸರೇ ಚಳ್ಳೆಹಣ್ಣು ತಿನ್ನಿಸಿದ್ದಾರೆ.
ರಾಜಗೋಪಾಲ ನಗರ ರೌಡಿ ಸೈಲೆಂಟ್ ಸುನಿಲ್, ಬೆಂಗಳೂರಿನಲ್ಲೇ ಹಲವು ವರ್ಷಗಳಿಂದ ಸಕ್ರಿಯನಾಗಿದ್ದಾನೆ. ಅದೇ ರೀತಿ ಒಂಟೆ ರೋಹಿತ್, ಸೈಲೆಂಟ್ ಸೂರ್ಯ , ಲೋಕೇಶ್ ಅಲಿಯಾಸ್ ಮುಲಾಮ, ಸೈಕಲ್ ರವಿ, ಬೇಕರಿ ರಘು, ಇಸ್ತಿಯಾಕ್ ಅಲಿಯಾಸ್ ಪೈಲ್ವಾನ್, ಕ್ರತಿಗುಪ್ಪೆ ಪವನ, ಅಕ್ಬರ್ ಅಲಿ, ಮಾರ್ಕೇಟ್ ವೇಡಿ, ಗುಡ್ಡ ಭರತ, ಮಹೀಮ್, ಮೈಕಲ್, ಕತ್ರಿಗುಪ್ಪೆ ಜಗ್ಗ, ವರಲಕ್ಷ್ಮಿ ಅಲಿಯಾಸ್ ಕಾರದಪುಡಿ ವರ ಲಕ್ಷ್ಮಿ, ಗೂಳಿ ಬಸವ, ಹೇಮಂತ್, ಕಬಾಬ್ ಮಂಜ, ಯಶಸ್ವಿನಿ, ದಡಿಯಾ ಮಹೇಶ ಸೇರಿ 50ಕ್ಕೂ ಹೆಚ್ಚು ರೌಡಿಗಳು ಪೊಲೀಸರಿಗೆ ಸಿಕ್ಕಿರಲಿಲ್ಲ.
ಪೊಲೀಸ್ ಕಮೀಷನರ್ ಕಮಲ್ ಪಂತ್ ರೌಡಿಗಳಿಗೆ ಖಡಕ್ ವಾರ್ನಿಂಗ್ ನೀಡಿದ್ದು, ಏರಿಯಾದಲ್ಲಿ ರೌಡಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರೆ ಅಂತಹವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಆಯಾ ವಿಭಾಗದ ಡಿಸಿಪಿಗಳಿಗೆ ತಾಕೀತು ಮಾಡಿದ್ದಾರೆ.
ಇದನ್ನೂ ಓದಿ : 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ.. ಜೈಲಿನಲ್ಲಿ ತಟ್ಟೆ, ಸ್ಪೂನ್ಗಳನ್ನೇ ಮಾರಕಾಸ್ತ್ರಗಳನ್ನಾಗಿ ಮಾಡಿದ ಕೈದಿಗಳು!