ಬೆಂಗಳೂರು: ನಗರದ ನಂದೀಶ್ವರ ಸೋರ್ಟ್ಸ್ ಆ್ಯಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್ ಹಾಗೂ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟದಲ್ಲಿ ತೊಡಗಿದ್ದ 67 ಜನರನ್ನು ಬಂಧಿಸಿ, 2.69 ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.
ವಿವೇಕ ನಗರದ ಕ್ಲಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಮಾಲೀಕ ಹರೀಶ್, ಕ್ಯಾಷಿಯರ್ ಸಂದೀಪ್ ಅವರಿಂದ 1,04,000 ರೂ. ನಗದು, ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವೇಕನಗರ, ಈಜಿಪುರ ಮುಖ್ಯ ರಸ್ತೆಯ ಶ್ರೀ ನಂದೀಶ್ವರ ಸೋರ್ಟ್ಸ್ ಆಂಡ್ ಕಲ್ಚರಲ್ ಅಸೋಶಿಯೇಷನ್ ಕ್ಲಬ್‌ನಲ್ಲಿ 10 ರೂ.ಗೆ 800 ರೂ.ಗಳನ್ನು ಕೊಡುವುದಾಗಿ ನಂಬಿಸಿ ಬಾಂಬೆ ಕಲ್ಯಾಣಿ ಮಟ್ಕಾ ಜೂಜಾಟ ಆಡಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ 18 ಜನರನ್ನು ಬಂಧಿಸಿದ್ದಾರೆ.
ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್ ಮೇಲೆ ದಾಳಿ:
ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ಜೂಜಾಟ ಆಡುತ್ತಿದ್ದ 49 ಜನರನ್ನು ಬಂಧಿಸಿ, 1,65,800 ರೂ. ನಗದು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳು ಮತ್ತಿಕೆರೆ, ರಾಮಯ್ಯ ಕಾಲೇಜ್ ಬಸ್ ನಿಲ್ದಾಣದ ಎದುರಿನ ಕಾಸ್ಮೋಪಾಲಿಟನ್ ಕಲ್ಚರಲ್ ಸೆಂಟರ್ ಕ್ಲಬ್‌ನಲ್ಲಿ ಜೂಜಾಟ ಆಡುತ್ತಿದ್ದರು.
ಆರೋಪಿಗಳಿಂದ 1,65,800 ರೂ ನಗದು, ವಿವಿಧ ಮುಖಬೆಲೆಯ ಒಟ್ಟು 1,150 ಟೋಕನ್‌ಗಳನ್ನು ವಶಪಡಿಸಿಕೊಂಡಿದ್ದಾರೆ.