ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿಗೆ ಬಂದು ನವಜಾತ ಶಿಶು ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಪ್ರಕರಣದಲ್ಲಿ 7 ಜನ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರ್.ಆರ್.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಶನಿವಾರ ಮಗು ಮಾರಾಟಕ್ಕೆ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡ ಸಿಸಿಬಿ ಸಂಘಟಿತ ಅಪರಾಧ ವಿಭಾಗದ ಅಧಿಕಾರಿಗಳು ಕಣ್ಣನ್ ರಾಮಸ್ವಾಮಿ, ಹೇಮಲತಾ, ಮಹಾಲಕ್ಷ್ಮಿ, ಶರಣ್ಯ, ಸಹಾಸಿನಿ, ರಾಧಾ ಹಾಗೂ ಗೋಮತಿ ಎಂಬುವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿಗಳು, ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಲು ಇಷ್ಟವಿಲ್ಲದವರ ಬಳಿ ಹಣದ ಆಮಿಷವೊಡ್ಡಿ, ಅವರ ಮಗುವನ್ನು ಮಾರಾಟ ಮಾಡಿಕೊಡುತ್ತೇವೆ ಎಂದು ಹೇಳಿ ಹೆರಿಗೆಯ ಬಳಿಕ ನವಜಾತ ಶಿಶುಗಳನ್ನು ತಮಿಳುನಾಡಿನಿಂದ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳು ಗರ್ಭಿಣಿಯರಿಗೆ ಮಾತ್ರವಲ್ಲದೆ, ಯುವತಿಯರಿಗೂ ಬಾಡಿಗೆ ತಾಯ್ತನದ ಮೂಲಕ ಮಗುವಿಗೆ ಜನ್ಮ ನೀಡಿ, ಮಗು ಮಾರಾಟ ಮಾಡಿ ಹಣ ಮಾಡಬಹುದು ಎಂದೂ ಆಮಿಷವೊಡ್ಡುತ್ತಿದ್ದರು.
ಬೆಂಗಳೂರಿನಲ್ಲಿ ಮಕ್ಕಳನ್ನು ಖರೀದಿಸುವವರಿಂದ 8 ರಿಂದ 10 ಲಕ್ಷ ರೂ ಹಣ ಪಡೆದು, ನಕಲಿ ದಾಖಲೆಗಳನ್ನು ನೀಡಿ ಮಾರಾಟ ಮಾಡುತ್ತಿದ್ದರು. ಆರ್. ಆರ್ ನಗರದಲ್ಲಿ 20 ದಿನದ ಗಂಡು ಮಗುವನ್ನು ಮಾರಾಟ ಮಾಡುತ್ತಿದ್ದಾಗ, ಮಗುವಿನ ತಾಯಿಯು ಸಹ ಜೊತೆಯಲ್ಲೇ ಇದ್ದಳು. ಆರೋಪಿಗಳು ಈ ಹಿಂದೆಯೂ ಸಹ ಇದೇ ರೀತಿ ಮಕ್ಕಳ ಮಾರಾಟ ಮಾಡಿರುವ ಕುರಿತು ಮಾಹಿತಿ ಇದ್ದು, ಸದ್ಯ ಆರೋಪಿಗಳನ್ನ ಹೆಚ್ಚಿನ ತನಿಖೆಗೊಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ತಿಳಿಸಿದ್ದಾರೆ.
ಸ್ವಿಫ್ಟ್ ಕಾರಿನಲ್ಲಿ ಹೋಗುತ್ತಿದ್ದ ಆರೋಪಿ ಕಣ್ಣನ್ ರಾಮಸ್ವಾಮಿ ಹಾಗೂ ಮೂವರು ಮಹಿಳೆಯರನ್ನು ಪೊಲೀಸರು ಅಡ್ಡಗಟ್ಟಿ ವಶಕ್ಕೆ ಪಡೆದು, ಅವರು ನೀಡಿದ ಮಾಹಿತಿ ಮೇರೆಗೆ ಉಳಿದ ಮೂವರು ಮಹಿಳೆಯರನ್ನು ಬಂಧಿಸಲಾಯಿತು. ಬಂಧಿತ ಏಳು ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದೇವೆ. ಪ್ರಕರಣದಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕಾಗಿ ಬಲೆ ಬೀಸಲಾಗುವುದು. ಬಂಧಿತ ಆರೋಪಿಗಳಿಂದ 20 ದಿನದ ಗಂಡು ಮಗುವನ್ನು ರಕ್ಷಿಸಲಾಗಿದೆ. ಇನ್ನು ಮಹಾಲಕ್ಷ್ಮಿ ಎಂಬುವವರು ಮಗು ಮಾರಾಟ ಮಾಡಿಸಲು ನಮ್ಮನ್ನು ಕರೆಸಿದ್ದಾಗಿ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಡುಬಡತನ ಹಿನ್ನೆಲೆ 21 ದಿನದ ಮಗು ಮಾರಾಟ ಮಾಡಿದ ತಾಯಿ.. ಆರು ಮಂದಿ ಬಂಧನ