ಬೆಂಗಳೂರು :ಕಂಡ ಕಂಡಲ್ಲಿ ಮನೆಗಳ್ಳತನ ಮಾಡುತ್ತಾ ಸಣ್ಣ ಕುರುಹು ಸಹ ಸಿಗದಂತೆ ನಗರದ ಮೋಸ್ಟ್ ವಾಂಟೆಡ್ ಖದೀಮರಾಗಿ ಬೆಳೆದು ನಿಂತಿದ್ದ ಮೂವರನ್ನ ಸಿಸಿಬಿ ಖೆಡ್ಡಾಕ್ಕೆ ಕೆಡವಿದೆ.
ಸಿಸಿಬಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಖದೀಮರು.. ಸೋಮಶೇಖರ್, ಪ್ರಜ್ವಲ್ ಹಾಗೂ ಮಾದೇಶ್ ಎಂಬುವರು ಬಂಧಿತರ ಆರೋಪಿಗಳು. ಬೆಂಗಳೂರಿನ 13 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಆರೋಪಿಗಳನ್ನ ಸಿಸಿಬಿ ಇನ್ಸ್‌ಪೆಕ್ಟರ್ ಹಜರೇಶ್ ಕಿಲ್ಲೇದಾರ್ ನೇತೃತ್ವದ ತಂಡ ಕೊನೆಗೂ ಆರೋಪಿಗಳನ್ನ ಬಂಧಿಸಿದೆ.
2018ರಲ್ಲಿ ಡಕಾಯಿತಿ ಯತ್ನದ ಆರೋಪದಡಿ ವಿಜಯನಗರ ಪೊಲೀಸರಿಂದ ಬಂಧಿತನಾಗಿ ಜೈಲು ಪಾಲಾಗಿದ್ದ ಸೋಮಶೇಖರ್ ಹಾಗೂ 2019ರಲ್ಲಿ ರಾಬರಿ ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರಿಂದ ಬಂಧಿತನಾಗಿ ಜೈಲು ಸೇರಿದ್ದ ಪ್ರಜ್ವಲ್. ಆದರೆ, ಜೈಲಿನಿಂದ ಹೊರ ಬಂದ ಬಳಿಕ ಜೊತೆಯಾಗಿ ಕೈಚಳಕ ತೋರಿಸಲು ನಿಂತಿದ್ದರು.
ಹೀಗೆ ಶುರುವಾದ ಇವರ ಜುಗಲ್ ಬಂಧಿಗೆ ಅಡೆತಡೆಯೇ ಇರಲಿಲ್ಲ. ಯಾಕಂದ್ರೆ, ನಾರ್ಮಲ್ ಕರೆಯಲ್ಲಿ ಮಾತನಾಡದ ಇವರು ಕೇವಲ ಇನ್ಸ್ಟಾಗ್ರಾಂ, ವಾಟ್ಸ್‌ಆ್ಯಪ್ ಬಳಸುತ್ತಿದ್ದರು. ಕಳ್ಳತನದ ಬಳಿಕವಂತೂ ಮತ್ತಷ್ಟು ಅಲರ್ಟ್ ಆಗುತ್ತಿದ್ದ ಈ ಖದೀಮರು ದಿನಕ್ಕೊಂದು ಸ್ಥಳ ಬದಲಿಸುತ್ತಿದ್ದರು.
ಆರೋಪಿಗಳಿಂದ ಕದ್ದಿರುವ ಮಾಲನ್ನ ಸ್ವೀಕರಿಸುತ್ತಿದ್ದ ಮಾದೇಶ್ ಎಂಬಾತ ಅದನ್ನ ಮಾರಿ ಹಣ ತಂದುಕೊಡುತ್ತಿದ್ದ. 13 ಠಾಣೆಗಳಲ್ಲಿ ಪ್ರಕರಣಗಳಿದ್ದರೂ ಸಿಗದ ಆರೋಪಿಗಳಿಗೆ ಇತ್ತೀಚಿಗೆ ಕುಂಬಳಗೋಡು ವ್ಯಾಪ್ತಿಯಲ್ಲಿ ನಡೆಸಿದ ಕಳ್ಳತನ ಕಂಟಕವಾಗಿ ಕಾಡಿತ್ತು.
ಫಿಂಗರ್ ಪ್ರಿಂಟ್ ಆಧರಿಸಿ ತನಿಖೆಗಿಳಿದಿದ್ದ ಸಿಸಿಬಿ ಇನ್ಸ್‌ಪೆಕ್ಟರ್ ಹಜರೇಶ್ ನೇತೃತ್ವದ ತಂಡಕ್ಕೆ ಆರೋಪಿಗಳು ಬೆಂಗಳೂರಿನ ಗ್ಯಾರೇಜ್‌ವೊಂದರಲ್ಲಿ ಕಾರಿನ ಬಣ್ಣ ಬದಲಿಸುವುದಕ್ಕೆ ನೀಡಿರುವ ಮಾಹಿತಿ ಲಭ್ಯವಾಗಿತ್ತು.
ಅದರಂತೆ 5 ದಿನಗಳ ಕಾಲ ಸತತವಾಗಿ ಕಾದು ಕುಳಿತ ಪೊಲೀಸರು ಅಂತಿಮವಾಗಿ ಖದೀಮರ ಲಾಂಗ್ ರನ್‌ಗೆ ಬ್ರೇಕ್ ಹಾಕಿದ್ದಾರೆ. 50 ಲಕ್ಷ ಮೌಲ್ಯದ 1.12 ಕೆಜಿ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಇನ್ನು ಈ ಕಾರ್ಯಾಚರಣೆಯಲ್ಲಿ ಯಶಸ್ವಿಯಾದ ತಂಡಕ್ಕೆ 30 ಸಾವಿರ ರೂ. ನಗದು ಬಹುಮಾನವನ್ನ ಕಮಿಷನರ್ ಕಮಲ್ ಪಂತ್ ಘೋಷಿಸಿದ್ದಾರೆ.