ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಎಸ್ ಡಿ ಶರಣಪ್ಪ ಅವರು ಮಾತನಾಡಿದರು ಬೆಂಗಳೂರು:ನಕಲಿ ದಾಖಲಾತಿ ಸೃಷ್ಟಿಸಿ ಫೈನಾನ್ಸ್ ಕಂಪನಿಯಲ್ಲಿ ಲೋನ್ ಪಡೆದು ಕಾರು ಖರೀದಿಸಿ ಸಾಲ ಪಾವತಿಸದೆ ವಂಚಿಸುತ್ತಿದ್ದ ಇಬ್ಬರು ವಂಚಕರನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಹೀಂದ್ರಾ ಫೈನಾನ್ಸ್ ಏರಿಯಾ ಮ್ಯಾನೇಜರ್ ಮೋಹನ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಪ್ರದೀಪ್ ಕುಮಾರ್ ಹಾಗೂ ಮನ್ಸೂರ್ ಎಂಬುವರನ್ನು ಬಂಧಿಸಿ ಆರೋಪಿಗಳಿಂದ 80 ಲಕ್ಷ ಮೌಲ್ಯದ 6 ಮಹೀಂದ್ರಾ ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಖಲಾತಿ ಪರಿಶೀಲನೆ ನಂತರ ಸಾಲ ಮಂಜೂರು ಮಾಡಿದ್ದ ಕಂಪನಿ: ಆರೋಪಿ ಪ್ರದೀಪ್ 2018ರಲ್ಲಿ ಮಹಿಂದ್ರಾ ಫೈನಾನ್ಸ್ ಕಚೇರಿಗೆ ಭೇಟಿ ನೀಡಿ 'ತಾನು ಟ್ರಾನ್ಸ್ ಪೋರ್ಟ್ ಸಲ್ಯೂಷನ್ ಕಂಪನಿ ತೆರೆದಿದ್ದು, ಕಾರು ಖರೀದಿಗಾಗಿ ಲೋನ್ ಬೇಕಿದ್ದು, ಇದಕ್ಕೆ ಸಂಬಂಧಿಸಿದ ಕಚೇರಿ ಹಾಗೂ ಮನೆ ವಿಳಾಸ ಸೇರಿದಂತೆ ಅಗತ್ಯ ದಾಖಲಾತಿಗಳನ್ನು ತೋರಿಸಿದ್ದ. ಪರಿಶೀಲನೆ ಬಳಿಕ ಕಂಪನಿಯು ಸಾಲ ಮಂಜೂರು ಮಾಡಿತ್ತು.
ಇದೇ ಹಣದಲ್ಲಿ ಆರು ಕಾರುಗಳನ್ನು ಖರೀದಿಸಿದ್ದ. ಖರೀದಿಸಿದ ಕಾರುಗಳಿಗೆ ಕಂತು ಪಾವತಿಸಲಿರಲಿಲ್ಲ. ಈ ಬಗ್ಗೆ ಆರೋಪಿ ಸೂಚಿಸಿದ್ದ ಕಂಪನಿ ಹಾಗೂ ಮನೆ ವಿಳಾಸಕ್ಕೆ ಹೋಗಿ ಪರಿಶೀಲಿಸಿದಾಗ ಆರೋಪಿ ಪತ್ತೆಯಾಗಿರಲಿಲ್ಲ. ಇದಾದ ಎರಡು ವರ್ಷಗಳ ಬಳಿಕ ಎಲೆಕ್ಟ್ರಾನಿಕ್ ಸಿಟಿ ಆರ್ಟಿಓ ಕಚೇರಿಯಿಂದ ಮಹಿಂದ್ರಾ ಫೈನಾನ್ಸ್ ಕಂಪನಿಗೆ ಪತ್ರ ಬಂದಿದೆ.
ಇದನ್ನೂ ಓದಿ :ಚುನಾವಣೆ ಆಮಿಷ.. ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ಮೌಲ್ಯದ ಇಸ್ತ್ರಿ ಪೆಟ್ಟಿಗೆಗಳು ಜಪ್ತಿ
ಹೈದರಾಬಾದ್ ಆರ್ಟಿಓ ಕಚೇರಿಯಿಂದ ವಾಹನ ವರ್ಗಾವಣೆ ಸಂಬಂಧ ಕೋರಿಕೆ ಪತ್ರ ಬಂದಿದ್ದು, ಇದನ್ನು ಪರಿಶೀಲಿಸುವಂತೆ ಸೂಚಿಸಿತ್ತು. ಈ ಬಗ್ಗೆ ದೂರುದಾರ ಮೋಹನ್‌ಕುಮಾರ್ ಪರಿಶೀಲಿಸಿದಾಗ ದಾಖಲಾತಿ, ಸಹಿ ಹಾಗೂ ಕಂಪನಿಯ ಸೀಲ್ಗಳನ್ನು ಫೋರ್ಜರಿ ಮಾಡಿರುವುದು ಕಂಡುಬಂದಿತ್ತು. ಇದೇ ರೀತಿ ಇನ್ನೂ ಐದು ವಾಹನಗಳನ್ನ ಪರಿಶೀಲಿಸಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮೈಕೊ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆ ಮೇರೆಗೆ ಈ ಬಗ್ಗೆ ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಎಸಿಪಿ ಜಗದೀಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.
ಇದನ್ನೂ ಓದಿ :ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಹಲ್ಲೆಗೈದ ಪತಿ ಅರೆಸ್ಟ್
ಹೆಚ್ಚು ಹಣ ಸಂಪಾದನೆ ಮಾಡುವ ಉದ್ದೇಶದಿಂದ ಪ್ರದೀಪ್ ನಕಲಿ ದಾಖಲಾತಿಗಳನ್ನು ಮನ್ಸೂರ್ ಎಂಬಾತನಿಂದ ಸೃಷ್ಟಿಸಿ ಫೈನಾನ್ಸ್ ಕಂಪನಿಯಿಂದ ಲೋನ್ ಪಾವತಿಸಿರುವುದಾಗಿ ನಿರಾಕ್ಷೇಪಣಾ ಪತ್ರ (ಎನ್‌ಓಸಿ) ಸೃಷ್ಟಿಸಿದ್ದಾನೆ. ನಂತರ ಆರ್ಟಿಓ ಕಚೇರಿಗೆ ನೀಡಿ ಅಲ್ಲಿಂದ ವಾಹನ ವರ್ಗಾವಣೆ ಪತ್ರ ಪಡೆದು ಬೇರೆಯವರಿಗೆ ಕಾರು ಮಾರಾಟದಲ್ಲಿ ತೊಡಗಿಸಿಕೊಂಡಿದ್ದ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ :ಲಾರಿಯಲ್ಲಿ ಅಕ್ರಮ ಮದ್ಯ ಸಾಗಾಟ, ಚಾಲಕ ಸೆರೆ; ₹47 ಲಕ್ಷ ಮೌಲ್ಯದ ಮಾಲು ವಶ