ಬೆಂಗಳೂರು:ಯುವತಿ ಪ್ರೀತಿಸಲಿಲ್ಲ ಎಂದು ಆಕೆಯ ತಂದೆಯ ಹತ್ಯೆಗೆ ಸಂಚು ರೂಪಿಸಿದ್ದ ರೌಡಿ ಮತ್ತು ಆತನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್‌ನ ರೌಡಿಗಳಾದ ಡೇವಿಡ್ ಮತ್ತು ಆತನ ಸಹಚರರಾದ ಮಂಜುನಾಥ್ ಸೇರಿದಂತೆ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ.
ಭಾನುವಾರ ರಾತ್ರಿ ಡೇವಿಡ್ ಯುವತಿ ತಂದೆಯ ಹತ್ಯೆಗೆ ಸಂಚು ರೂಪಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಎಸಿಪಿ ಧರ್ಮೇಂದ್ರ ನೇತೃತ್ವದ ತಂಡ, ಕಾರ್ಯಾಚರಣೆ ನಡೆಸಿ ಅವರೆಲ್ಲರನ್ನು ಬಂಧಿಸಿದೆ.
ವಿವರ:
ಆಟೋ ಚಾಲಕರೊಬ್ಬರ ಪುತ್ರಿಯನ್ನು ರೌಡಿ ಡೇವಿಡ್ ಎಂಬಾತ ಪ್ರೀತಿಸುತ್ತಿದ್ದ. ಈ ವಿಚಾರ ಯುವತಿಯ ತಂದೆಗೆ ತಿಳಿದು ಮಗಳ ತಂಟೆಗೆ ಬಾರದಂತೆ ಎಚ್ಚರಿಕೆ ಕೊಟ್ಟಿದ್ದರು. ಆದರೂ ಸುಮ್ಮನಾಗಿರಲಿಲ್ಲ. ಎರಡು ದಿನಗಳ ಹಿಂದೆ ಯುವತಿ ಹುಟ್ಟುಹಬ್ಬವೆಂದು ಆಕೆಯ ಮನೆ ಮುಂದೆ ಕೇಕ್ ಕತ್ತರಿಸಿದ್ದಾನೆ. ಈ ವೇಳೆ ಯುವತಿಯ ತಂದೆ ಮತ್ತು ಡೇವಿಡ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ಕೆರಳಿದ ಡೇವಿಡ್ ತನ್ನ ಪ್ರೀತಿಗೆ ಯುವತಿಯ ತಂದೆ ಅಡ್ಡಿಯಾಗುತ್ತಿದ್ದಾನೆ ಎಂದು ಕೊಲೆಗೆ ನಿರ್ಧರಿಸಿದ್ದ.
ಹಲವು ಬಾರಿ ಯುವತಿಯ ಮನೆ ಬಳಿ ತೆರಳಿ ಕೊಲೆಗೆ ಯತ್ನಿಸಿ ವಿಫಲರಾಗಿದ್ದ ಆರೋಪಿಗಳು ಭಾನುವಾರ ರಾತ್ರಿ ಮತ್ತೆ ಹತ್ಯೆಗೆ ಸಜ್ಜಾಗಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿಯಲ್ಲಿ ಯುವಕನ ಹತ್ಯೆ ಕೇಸ್: ಡಿವೈಎಸ್‌ಪಿ ನೇತೃತ್ವದ ವಿಶೇಷ ತಂಡದಿಂದ ತನಿಖೆ