ಬೆಂಗಳೂರು: ನಗರದಲ್ಲಿ ಗನ್ ತೋರಿಸಿ ಬಡ್ಡಿ ವಸೂಲಿ ಮಾಡ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಮಂಜುನಾಥ್ ಅಲಿಯಾಸ್ ಫೈನಾನ್ಸ್ ಮಂಜ (ಗೋಲ್ಡ್ ಮಂಜ) ಬಂಧಿತ ಆರೋಪಿ. ಬಡ್ಡಿ ಹಣ ವಸೂಲಿಗಾಗಿಯೇ ಮಂಜ ಅನಧಿಕೃತವಾಗಿ ಖಾಸಗಿ ಗನ್‌ಮ್ಯಾನ್ ನೇಮಿಸಿಕೊಂಡಿದ್ದ. ಹಣ ನೀಡದವರಿಗೆ ಈತ ಬೆದರಿಕೆ ಹಾಕುತ್ತಿದ್ದ ಎನ್ನಲಾಗ್ತಿದೆ.
ಇತ್ತೀಚೆಗೆ ಮಂಜನಿಂದ ಹಣ ಪಡೆದುಕೊಂಡಿದ್ದ ಉದ್ಯಮಿ ವಿ. ಶೇಖರ್ ಎಂಬವರ ಬಳಿ ಹೆಚ್ಚು ಬಡ್ಡಿ ವಸೂಲಿ ಮಾಡಲು ಮುಂದಾಗಿದ್ದ. ಇದಕ್ಕೆ ಶೇಖರ್ ನಿರಾಕರಿಸಿದಾಗ ಗನ್ ತೋರಿಸಿ, ಹಣ ನೀಡದಿದ್ದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಮಂಜ ಹಣ ನೀಡಿ ಜಮೀನಿನ ಮುಂಗಡ ಪತ್ರದ ಕರಾರನ್ನು ನೋಂದಣಿ ಮಾಡಿಸಿಕೊಂಡಿದ್ದ ಎಂಬ ಆರೋಪ ಕೇಳಿಬಂದಿದೆ.
ಗನ್ ತೋರಿಸಿ ಬಡ್ಡಿ ಹಣ ವಸೂಲಿ ಶೇಖರ್ ಅವರು ಸಿಸಿಬಿ ಇನ್ಸ್ಪೆಕ್ಟರ್ ಪುನೀತ್ಕುಮಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದರು. ಕರ್ನಾಟಕ ಪ್ರೈವೇಟ್ ಸೆಕ್ಯೂರಿಟಿ ಎಜನ್ಸಿ ಕಾಯ್ದೆ 2005 ಕಲಂ ಅಡಿಯಲ್ಲಿ ಆರೋಪಿಯನ್ನ ಬಂಧಿಸಿ, ಪ್ರಕರಣ ದಾಖಲಿಸಲಾಗಿದೆ.
ಈತ ಮೈಮೇಲೆ ಕೆಜಿಗಟ್ಟಲ್ಲೇ ಚಿನ್ನಾಭರಣ ಹಾಕಿಕೊಂಡು ಬಡ್ಡಿ ವ್ಯವಹಾರ ನಡೆಸುತ್ತಿದ್ದ. ಹಾಗಾಗಿ ಗೋಲ್ಡ್ ಮಂಜ ಎಂದು ಕರೆಯುತ್ತಿದ್ದರು. ಸೆಕ್ಯೂರಿಟಿ ಎಜೆನ್ಸಿ ಅಥವಾ ಪೊಲೀಸ್ ಇಲಾಖೆಯಿಂದ ಪರವಾನಗಿ ಪಡೆಯದೆ ಅನಧಿಕೃತವಾಗಿ ಗನ್‌ಮ್ಯಾನ್ ಹೊಂದಿದ್ದ. ಅಲ್ಲದೆ, ಪಿಸ್ತೂಲ್, ಡಬಲ್ ಬ್ಯಾರೆಲ್ ಗನ್ಗಳಿಗೆ ಪರವಾನಗಿ ಅವಧಿ ಮುಗಿದಿದ್ದರೂ ನವೀಕರಣ ಮಾಡಿಸಿರಲಿಲ್ಲ. ಆರೋಪಿಯಿಂದ ಪಿಸ್ತೂಲ್ ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.