ಬೆಂಗಳೂರು:ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಇಳಿದಿರುವ ಸಿಸಿಬಿ ಪೊಲೀಸರು ಕೇವಲ ಆರೋಪಿಗಳ ಹೇಳಿಕೆಯಾಧಾರಗಳ ಮೇರೆಗೆ ನಿರೂಪಕಿ ಅನುಶ್ರೀಗೆ ನೋಟಿಸ್ ಕೊಟ್ಟಿಲ್ಲ. ಪಕ್ಕಾ ಸಾಕ್ಷ್ಯಗಳನ್ನು ಇಟ್ಟುಕೊಂಡೇ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಮೊದಲು ಪ್ರಕರಣದಲ್ಲಿ ಪ್ರತೀಕ್ ಶೆಟ್ಟಿಯನ್ನು ಬಂಧಿಸಿ ಆತನ ಮೊಬೈಲ್ಅನ್ನು ರಿಟ್ರೀವ್ ಮಾಡಲಾಗಿತ್ತು. ಆ ವೇಳೆ ಕೋಡ್ ವರ್ಡ್ ಮುಖಾಂತರ ಬೆಂಗಳೂರು ಟು ಮಂಗಳೂರು ಡ್ರಗ್ ಜಾಲ ಹಬ್ಬಿರುವುದು ತಿಳಿದುಬಂದಿದೆ. ಪ್ರತೀಕ್ ಶೆಟ್ಟಿ ಮೊಬೈಲ್ನಲ್ಲಿ ಕಿಶೋರ್ ಶೆಟ್ಟಿ ಮತ್ತು ತರುಣ್ಗೆ ಮಾಡಿರುವ ಕೆಲ ಚಾಟ್ ಲಿಸ್ಟ್ ಸಿಕ್ಕಿದವು. ತಕ್ಷಣ ಮಂಗಳೂರು ಪೊಲೀಸರಿಗೆ ಮಾಹಿತಿ ರವಾನೆ ಮಾಡಿ ಆರೋಪಿ ಕಿಶೋರ್ ಶೆಟ್ಟಿ ಮತ್ತು ತರುಣ್ ಅನ್ನು ಬಂಧಿಸಿ ಮಾಹಿತಿ ಪಡೆಯಲಾಯಿತು. ತದ ನಂತರ ಮೊಬೈಲ್ ರಿಟ್ರೀವ್ ಮಾಡಿದಾಗ ಅನುಶ್ರೀ ಜೊತೆಗಿನ ನಂಟು ಬಯಲಾಗಿತ್ತು ಎಂದು ಹೇಳಲಾಗ್ತಿದೆ.
ಕಿಶೊರ್ ಶೆಟ್ಟಿ, ತರುಣ್, ಅನುಶ್ರೀ ಎಲ್ಲರೂ ಡ್ಯಾನ್ಸ್ ಕ್ಲಾಸ್ನಲ್ಲಿ ಮಂಗಳೂರಲ್ಲಿ ಪರಿಚಯವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ನಂಟು ಹೊಂದಿದ್ದಾರೆ. ಕಿಶೋರ್ ಶೆಟ್ಟಿ ಮತ್ತು ತರುಣ್ ಇಬ್ಬರ ಮೊಬೈಲನ್ನು ವಶಕ್ಕೆ ಪಡೆದಾಗ ಮೊಬೈಲ್ನಲ್ಲಿ ಕೆಲ ಸಂದೇಶ, ಕಾಂಟ್ಯಾಕ್ಟ್ ಲಿಸ್ಟ್ ಡಿಲಿಟ್ ಆಗಿರೋದು ಪತ್ತೆಯಾಗಿದೆ. ಕಿಶೋರ್ ಶೆಟ್ಟಿ, ತರುಣ್ ಶೆಟ್ಟಿ ಗೆಳೆಯರಿಗೆ ವಾಟ್ಸ್ ಅಪ್ ಮೂಲಕವೇ ಅತಿ ಹೆಚ್ಚು ಕಾಲ್ ಮಾಡಿದ್ದಾರೆ. ಅದರಲ್ಲಿ ಅನುಶ್ರೀ ಕೂಡ ಒಬ್ಬರು ಎನ್ನಲಾಗ್ತಿದೆ.
ಸದ್ಯ ಇಬ್ಬರ ಸಂಪರ್ಕದಲ್ಲೂ ನಿರೂಪಕಿ ಅನುಶ್ರೀ ಇರುವ ಆಧಾರದ ಮೇರೆಗೆ ಮಂಗಳೂರಿನಲ್ಲಿ ಸಿಸಿಬಿ ತನಿಖಾಧಿಕಾರಿಗಳ ವಿಚಾರಣೆಗೆ ಒಳಪಡಿಸಿದ್ದಾರೆ. ಮಂಗಳೂರು ವಿಚಾರಣೆ ಬಳಿಕ ಬೆಂಗಳೂರು ಪ್ರಧಾನ ಸಿಸಿಬಿ ಕಚೇರಿಯಲ್ಲಿ ವಿಚಾರಣೆ ನಡೆಸುವ ಸಾಧ್ಯತೆ ಇದೆ. ಸಿಸಿಬಿ ಪೊಲೀಸರಲ್ಲಿ ಬಹುತೇಕ ಸಾಕ್ಷ್ಯಗಳಲ್ಲಿದ್ದು, ಪಾರ್ಟಿಗಳಲ್ಲಿ ಭಾಗಿಯಾಗ್ತಿದ್ದ ಕುರಿತು ಮೂವರು ಆರೋಪಿಗಳು ನೀಡಿರುವ ಹೇಳಿಕೆ ಹಿನ್ನೆಲೆ ಕೆಲ ಪ್ರತಿಷ್ಠಿತ ಹೋಟೆಲ್ಗಳಲ್ಲಿನ ಸಿಸಿಟಿವಿಗಳನ್ನು ವಶಕ್ಕೆ ಪಡೆಯಲು ಸಿಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ.