ಬೆಂಗಳೂರು: ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ಘಾಟಿನ ಬಗ್ಗೆ ಕೇಳಿಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ನಿರ್ಮಾಪಕ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ದಾಖಲೆ ಕೊಡುವುದಾಗಿ ತಿಳಿಸಿ ಸಿಸಿಬಿ ಕಚೇರಿಗೆ ಬಂದಿದ್ದರು. ಸದ್ಯ ಸಿಸಿಬಿ ಎರಡನೇ ಬಾರಿಗೆ ಇಂದ್ರಜಿತ್ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ನಲ್ಲಿ ಮತ್ತಷ್ಟು ದಾಖಲೆಗಳನ್ನು ನೀಡುವಂತೆ ತಿಳಿಸಿದೆ.
ಕಳೆದೆರಡು ದಿನ ಹಿಂದೆ ಇಂದ್ರಜಿತ್ ಸಿಸಿಬಿ ಕಚೇರಿಗೆ ಆಗಮಿಸಿ 10-15 ಜನ ನಟ, ನಟಿಯರ ವಿಚಾರಗಳನ್ನ ಬಾಯ್ಬಿಟ್ಟು ಸುಮಾರು 6 ಪುಟಗಳ ಹೇಳಿಕೆಯನ್ನು ಕೂಡ ನೀಡಿದ್ದರು. ಆದರೆ ನಟ, ನಟಿಯರು ಭಾಗಿಯಾಗಿದ್ದಾರೆ ಎಂಬುದಕ್ಕೆ ಸರಿಯಾದ ಸಾಕ್ಷ್ಯಗಳನ್ನ ಕೊಟ್ಟಿರಲಿಲ್ಲ ಎನ್ನಲಾಗ್ತಿದೆ. ಹೀಗಾಗಿ ಸದ್ಯ ಸಾಕ್ಷಿ, ದಾಖಲೆಗಳನ್ನ ಹಾಜರುಪಡಿಸುವಂತೆ ಅಧಿಕಾರಿಗಳು ಇಂದ್ರಜಿತ್ ಅವರಿಗೆ ತಿಳಿಸಿದ್ದಾರೆ.
ಇಂದ್ರಜಿತ್ ಲಂಕೇಶ್ಗೆ ಸಿಸಿಬಿ ನೋಟಿಸ್ ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಡ್ರಗ್ಸ್ ಜಾಲವನ್ನ ಭೇದಿಸೋದಕ್ಕೆ ಸಿಸಿಬಿ ಅಧಿಕಾರಿಗಳು ವಿಶೇಷ ತಂಡವಾಗಿ ಕಾರ್ಯಚರಣೆ ನಡೆಸುತ್ತಿದ್ದಾರೆ. ಡ್ರಗ್ಸ್ ಬೆಳಗಿನಜಾವ ಬಸ್ಸು, ಖಾಸಗಿ ವಾಹನದಲ್ಲಿ ಬರುವ ಮಾಹಿತಿ ಮೇರೆಗೆ ವಿಶೇಷ ಶ್ವಾನ ತಂಡ ಹಾಗೂ ಪೊಲೀಸರು ಏರ್ ಪೋರ್ಟ್, ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಪರಿಶೀಲನೆ ಮಾಡಿದ್ದೇವೆ ಎಂದರು.
ಹಾಗೆ ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದ್ರಜಿತ್ ಅವರು ನಮಗೆ ಕೆಲ ಮಾಹಿತಿ ಕೊಡುತ್ತೇನೆಂದು ಮೊನ್ನೆ ಸಿಸಿಬಿ ಕಚೇರಿಗೆ ಬಂದಿದ್ದರು. ಆದರೆ ಲಂಕೇಶ್ ಅವರು ಸರಿಯಾದ ದಾಖಲೆಗಳನ್ನ ಕೊಟ್ಟಿಲ್ಲ. ಸರಿಯಾದ ದಾಖಲೆ ಕೊಡುವಂತೆ ನಾಳೆ ಬರುವಂತೆ ಕರೆದಿದ್ದೇವೆ. ಕೆಲ ನಟ-ನಟಿಯರ ಹೆಸರುಗಳನ್ನ ಹೇಳಿರುವುದು ನಿಜ. ಆದರೆ ಯಾವುದೇ ದಾಖಲೆ ನೀಡಿಲ್ಲ. ಹೀಗಾಗಿ ಪುರಾವೆಗಳಿಲ್ಲದೇ ಯಾವುದೇ ತನಿಖೆ ಮಾಡಲು ಸಾಧ್ಯವಿಲ್ಲ. ಸಂಬಂಧಪಟ್ಟ ಪುರಾವೆ ನೀಡಲು ಮತ್ತೊಮ್ಮೆ ಅವಕಾಶ ನೀಡಿದ್ದೇವೆ ಎಂದು ಸಂದೀಪ್ ಪಾಟೀಲ್ ತಿಳಿಸಿದರು.