ಬೆಂಗಳೂರು:ಸಿಸಿಬಿಯ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಎಸ್ಐ ಸೇರಿದಂತೆ 26 ಮಂದಿ ಸಿಬ್ಬಂದಿಯನ್ನು ವರ್ಗಾಯಿಸಿ ನಗರ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಡಿಸಿಪಿ ನಿಶಾ ಜೇಮ್ಸ್ ಆದೇಶ ಹೊರಡಿಸಿದ್ದಾರೆ.
ಎಎಸ್ಐ, ಹೆಡ್ ಕಾನ್‌ಸ್ಟೇಬಲ್ ಹಾಗೂ ಕಾನ್‌ಸ್ಟೇಬಲ್ ಸೇರಿದಂತೆ 26 ಸಿಬ್ಬಂದಿಯನ್ನು ನಗರದ ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆ ಮಾಡಲಾಗಿದೆ. ಒಒಡಿ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ, ಸೂಚಿಸಿದ ಪ್ರದೇಶಗಳಲ್ಲಿ ವರದಿ ಮಾಡಿಕೊಂಡು ಪಾಲನಾ ವರದಿ ಕಳುಹಿಸುವಂತೆ ಆದೇಶಿಸಲಾಗಿದೆ.
ಇದನ್ನೂ ಓದಿ:ಚನ್ನಪಟ್ಟಣ: ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ನಾಪತ್ತೆ
ದೇಶದಲ್ಲೇ ಸದ್ದು ಮಾಡಿದ್ದ ಬಿಟ್ ಕಾಯಿನ್ ಸದ್ದಿನ ಎಫೆಕ್ಟ್ ಕೆಳ ಹಂತದ ಪೊಲೀಸರಿಗೂ ತಟ್ಟಿದೆ ಎಂದು ಹೇಳಲಾಗ್ತಿದೆ. ಸಿಸಿಬಿಯಲ್ಲಿ ತನಿಖೆಯಾಗಿದ್ದ ಬಿಟ್ ಕಾಯಿನ್ ಹಗರಣ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಸದ್ಯ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವರ್ಗಾವಣೆಯಾಗ್ತಿದ್ದಂತೆ ಸಿಸಿಬಿಯ ಬಹುತೇಕ ಸಿಬ್ಬಂದಿಯನ್ನು ಎತ್ತಂಗಡಿ ಮಾಡಲಾಗಿದೆ.
ಪೊಲೀಸರ ಸಾಮೂಹಿಕ ವರ್ಗಾವಣೆಗೆ ಅಪಸ್ವರ ಕೇಳಿಬಂದಿದ್ದು, ಸಿಸಿಬಿಯಲ್ಲಿ ಕೆಲಸ ಮಾಡಬೇಕಾದರೆ ಅನುಭವ ಮತ್ತು ನಗರದ ಮಾಹಿತಿ ಅತ್ಯಗತ್ಯ. ಆದ್ರೆ ಏಕಾಏಕಿ ಎಲ್ಲಾ ಸಿಬ್ಬಂದಿ ವರ್ಗಾವಣೆಯಿಂದ ಸಿಸಿಬಿಯಲ್ಲಿ ಕೆಲಸ ಮಾಡೋದು ಕಷ್ಟ ಎಂದು ಕೆಲ ಪೊಲೀಸ್ ಹಿರಿಯ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.