ಬೆಂಗಳೂರು :ಯುವ ಜನತೆಯನ್ನ ಗುರಿಯಾಗಿಸಿಕೊಂಡು ಗ್ರಾಹಕರನ್ನ ಸೆಳೆದು ಅವರನ್ನು ಸಾಲದ ಖೆಡ್ಡಾಕ್ಕೆ ಬೀಳಿಸುತ್ತಿರುವ ಚೀನಿ ಆ್ಯಪ್, ಅವರಿಗೆ ಕಿರುಕುಳವನ್ನೂ ಕೂಡಾ ನೀಡುತ್ತಿವೆ. ಇಂತಹವುಗಳನ್ನು ಸೇರಿ, ಸ್ಥಳೀಯ ಲೋನ್ ಆ್ಯಪ್ ಕಂಪನಿಗಳ ವಿರುದ್ಧ ಸಮರ ಸಾರಿರುವ ಸಿಸಿಬಿಯು ಈ ವರ್ಷದಲ್ಲಿ ನೂರಾರು ಪ್ರಕರಣ ದಾಖಲಿಸಿಕೊಂಡು 87 ಕೋಟಿ ರೂ. ವಶಕ್ಕೆ ಪಡೆದುಕೊಂಡಿದೆ.
ಲೋನ್ ಆ್ಯಪ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು ನಗರದಲ್ಲಿ ಮಾನಕ್ಕೆ ಹೆದರಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವುದು ಆ್ಯಪ್ ಕಂಪನಿಗಳು ನೀಡುತ್ತಿರುವ ಕಿರುಕುಳಕ್ಕೆ ಕೈಗನ್ನಡಿಯಾಗಿದೆ.
ಪ್ರಸ್ತಕ ವರ್ಷದಲ್ಲಿ ನಗರದ ಎಲ್ಲ ಸೆನ್ ಪೊಲೀಸ್ ಠಾಣೆಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಸಿಸಿಬಿ 22 ಪ್ರಕರಣ ದಾಖಲಿಸಿಕೊಂಡು ಲೋನ್ ಆ್ಯಪ್ ಕಂಪನಿಗಳ ಬ್ಯಾಂಕ್ ಖಾತೆಯಲ್ಲಿದ್ದ ಸುಮಾರು 87 ಕೋಟಿ ರೂ ಹಣವನ್ನು ವಶಕ್ಕೆ ಪಡೆದುಕೊಂಡಿದೆ.
15 ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲು: ಈಸಿ ಮನಿ ಲೋನ್ ಆ್ಯಪ್, ಸ್ಯಾಲರಿ ಪ್ಲೀಸ್, ಈಸಿ ಲೋನ್, ಕ್ಯಾಸ್ ಮೀ, ಗೇಟ್ ರೂಪಿ, ಮ್ಯಾಜಿಕ್ ಲೋನ್ ಸೇರಿದಂತೆ ಹಲವು ಕಂಪನಿಗಳ ವಿರುದ್ಧ ನಗರದ ಸೈಬರ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಇತ್ತೀಚೆಗೆ ನಗರ ಪೂರ್ವ ವಿಭಾಗದ ಸೆನ್ ಠಾಣೆಯಲ್ಲಿ ವ್ಯಕ್ತಿಯೋರ್ವ ನೀಡಿದ ದೂರಿನ ಮೇರೆಗೆ 15 ಕಂಪನಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿತ್ತು ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಡಾ. ಎಸ್ ಡಿ ಶರಣಪ್ಪ ತಿಳಿಸಿದ್ದಾರೆ.