ಬೆಂಗಳೂರು: ನಟಿ ಸಂಜನಾ ಗಲ್ರಾನಿ ನಿನ್ನೆ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಪೊಲೀಸರ ಬಳಿ ಕಿರಿಕ್ ಮಾಡಿದ ವಿಚಾರವೇ ಸಂಜನಾಗೆ ಮುಳುವಾಗುವ ಸಾಧ್ಯತೆ ಇದೆ.
ನಟಿ ಸಂಜನಾ ತನ್ನ ಆಪ್ತ ರಾಹುಲ್ ಬಂಧನವಾದ ವೇಳೆ ತನಿಖೆಗೆ ತಾನು ಸಹಕರಿಸುತ್ತೇನೆ, ತಾನೇನೂ ತಪ್ಪು ಮಾಡಿಲ್ಲ. ಯಾವುದೇ ರೀತಿಯ ತನಿಖೆಗೆ ಕರೆದರೂ ಸಹ ಸಹಾಕರ ನೀಡುವುದಾಗಿ ಹೇಳಿದ ಸಂಜನಾ ಇದೀಗ ತಮ್ಮ ವರಸೆ ಬದಲಾಯಿಸಿದ್ದಾರೆ.
ಸಂಜನಾ ಮನೆ ಮೇಲೆ ಸಿಸಿಬಿ ದಾಳಿ ಮಾಡಿ ಪೊಲೀಸರ ವಿಚಾರಣೆ ವೇಳೆ ಸೈಲೆಂಟಾಗಿ ತನಗೂ ಪ್ರಕರಣಕ್ಕೂ ಸಂಬಂಧ ಇಲ್ಲವೆಂಬಂತೆ ಇದ್ದರು. ಆದ್ರೆ ಆರೋಪಿಗಳು ಯಾವ ರೀತಿ ಪರಿಚಯ, ಪಾರ್ಟಿಯಲ್ಲಿ ಹೇಗೆ ಭಾಗಿಯಾಗ್ತಿದ್ದೆ ಅನ್ನೋದನ್ನು ವಿಚಾರಣೆ ವೇಳೆ ಬಾಯಿಬಿಟ್ಟಿದ್ರು. ಆದ್ರೆ ಪೊಲೀಸರಿಗೆ ಡ್ರಗ್ಸ್ ಪ್ರಕರಣದಲ್ಲಿ ಸಾಕ್ಷ್ಯಗಳು ಪ್ರಮುಖವಾಗುವ ಕಾರಣ ನಟಿ ಸಂಜನಾರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ರಕ್ತ ಮಾದರಿ ಪರೀಕ್ಷೆ ಮಾಡಲು ಮುಂದಾದಾಗ, ನನ್ನನ್ನು ಬಕ್ರಾ ಮಾಡಿ ಪರೀಕ್ಷೆಗೆ ಕರೆದಿದ್ದೀರಾ ಎಂದು ಅರ್ಧ ಗಂಟೆ ಪೊಲೀಸರ ಎದುರು ಕಿರಿಕ್ ಮಾಡಿದ್ದಾರೆ.
ತದ ನಂತರ ಡೋಪಿಂಗ್ ಟೆಸ್ಟ್ಗೆ ತಲೆಕೂದಲು ಸಂಗ್ರಹ ಮಾಡಿ ಸದ್ಯ ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ. ಮಾದಕ ವ್ಯಸನಿ ಡ್ರಗ್ಸ್ ಸೇವಿಸಿದ ಒಂದೂವರೆ ತಿಂಗಳ ಬಳಿಕ ತಲೆಕೂದಲಿನ ಬೇರಿಗೆ ಡ್ರಗ್ಸ್ ಅಂಶ ಸೇರುತ್ತದೆ. ಕೊಕೆನ್ ಅಥವಾ ಎಂಡಿಎಂಎ ಸೇವಿಸಿದರೆ ಹೇರ್ ಪೊಲಿಕ್ ಪರೀಕ್ಷೆಯಲ್ಲಿ ತಿಳಿದುಬರುತ್ತದೆ. ಸದ್ಯ ಸಂಜನಾ ಮಹಿಳಾ ಸಾಂತ್ವನ ಕೇಂದ್ರದಲ್ಲಿದ್ದು, ಈಕೆಯನ್ನು ಇಂದು ಸಿಸಿಬಿ ಹಿರಿಯಾಧಿಕಾರಿ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ರವಿ ಕುಮಾರ್ ಹಾಗೂ ಮಹಿಳಾಧಿಕಾರಿ ಅಂಜುಮಾಲಾ ಅವರು ತನಿಖೆ ನಡೆಸಿ, ನಿನ್ನೆಯ ಕಿರಿಕ್ ಬಗ್ಗೆ ಪ್ರಶ್ನೆ ಮಾಡಲಿದ್ದಾರೆ.