ಬೆಂಗಳೂರು: ರಾಜ್ಯದಲ್ಲಿ ಬೆಚ್ಚಿ ಬೀಳಿಸಿದ್ದ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಪ್ರಕರಣದ ಆರೋಪಿಗೂ 12 ವರ್ಷಗಳ ಹಿಂದೆ ನಡೆದಿದ್ದ ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಸೆರೆಯಾಗಿರುವ ಶಂಕಿತ ಉಗ್ರನಿಗೂ ನಂಟು ಇರಬಹುದೆ ಎಂಬುದರ ಬಗ್ಗೆ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ ಗೂ ಬೆಂಗಳೂರು ಸೀರಿಯಲ್ ಬಾಂಬ್ ಬ್ಲಾಸ್ಟ್ ಗೂ ನಂಟು: ಸಿಸಿಬಿ ತನಿಖೆ
ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಪ್ರಕರಣದ ಆರೋಪಿಗೂ 12 ವರ್ಷಗಳ ಹಿಂದೆ ನಡೆದಿದ್ದ ಬೆಂಗಳೂರು ಸರಣಿ ಬಾಂಬ್ ಸ್ಫೋಟದಲ್ಲಿ ಸೆರೆಯಾಗಿರುವ ಶಂಕಿತ ಉಗ್ರನಿಗೂ ನಂಟು ಇರಬಹುದೆ ಎಂದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
2008ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಶಂಕಿತ ಉಗ್ರ ಶೊಯೇಬ್ ನನ್ನು ಕೇರಳದಲ್ಲಿ ಬಂಧಿಸಲಾಗಿದೆ. 2014ರ ಡಿ.28 ರಂದು ಚರ್ಚ್ ಸ್ಟ್ರೀಟ್ ರಸ್ತೆಯ ಕೊಕನೆಟ್ ಗ್ರೋವ್ ರೆಸ್ಟೋರೆಂಟ್ ಬಳಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಭವಾನಿ ಎಂಬುವರು ಮೃತಪಟ್ಟರೆ ಮೂವರು ಗಾಯಗೊಂಡಿದ್ದರು. ಬಳಿಕ ಪ್ರಕರಣವನ್ನು ಗೃಹ ವ್ಯವಹಾರಗಳ ಸಚಿವಾಲಯ ಸೂಚನೆ ಮೇರೆಗೆ ಎನ್ಐಎ ತನಿಖೆಗೆ ನೀಡಲಾಗಿತ್ತು. 2016ರ ಜ.2 ರಂದು ಆರೋಪಿ ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಅಹಮದ್ ಬಾದ್ ಮೂಲದ ಆಲಂ ಜಬ್ ಆಫ್ರಿದಿ ಎಂಬಾತನನ್ನು ಬಂಧಿಸಲಾಗಿತ್ತು. ಈತ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಸರಣಿ ಬಾಂಬ್ ಸ್ಫೋಟಕ್ಕೂ ಹಾಗೂ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟಕ್ಕೂ ಏನಾದರೂ ಲಿಂಕ್ ಇದೆಯಾ? ಎರಡು ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಮೊದಲೇ ಪರಿಚಯವಾಗಿದ್ದರಾ? ಎಂಬ ಆಯಾಮದಲ್ಲಿ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಸೀರಿಯಲ್ ಬಾಂಬ್ ಬ್ಲಾಸ್ಟ್ ಘಟನೆ ನಡೆದು 12 ವರ್ಷಗಳೇ ಗತಿಸಿವೆ. ಇದುವರೆಗೂ ಬಂಧನಕ್ಕೆ ಒಳಗಾದವರ ಪಟ್ಟಿ ನೋಡುವುದಾದರೆ ಈತ 32ನೇ ಆರೋಪಿ. ಇನ್ನೂ ಆರು ಮಂದಿ ಆರೋಪಿಗಳು ಪತ್ತೆಯಾಗಿಲ್ಲ. ಅದರಲ್ಲಿ ನಾಲ್ಕು ಮಂದಿ ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ. ಶೋಯೇಬ್ ಹೊರತುಪಡಿಸಿದರೆ 21 ಮಂದಿ ಶಂಕಿತ ಉಗ್ರರು ನ್ಯಾಯಾಂಗ ಬಂಧನದಲ್ಲಿದ್ದಾರೆ.