ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆಯನ್ನು ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ರಾಗಿಣಿ ಆಪ್ತ ರವಿಶಂಕರ್ ಬಳಿಯಿಂದ ಆದಿತ್ಯ ಆಳ್ವಾನ ಮಹತ್ವದ ಮಾಹಿತಿಯನ್ನು ತನಿಖಾಧಿಕಾರಿಗಳು ಸಂಗ್ರಹಿಸುತ್ತಿದ್ದಾರೆ.
ಗೋವಾ, ಮುಂಬೈ, ಪಂಜಾಬ್, ಆಂಧ್ರಪ್ರದೇಶ ಮತ್ತು ವಿದೇಶದಿಂದ ಮಾದಕ ವಸ್ತುಗಳನ್ನು ನೈಜೀರಿಯಾ ಪೆಡ್ಲರ್ ಮುಖಾಂತರ ತರಿಸುತ್ತಿದ್ದ ಆದಿತ್ಯ ಆಳ್ವಾ ಪಾರ್ಟಿಗಳ ಆಯೋಜನೆ ಮಾಡುತ್ತಿದ್ದ. ಈತನ ಪೈವ್ ಸ್ಟಾರ್ ಹೊಟೇಲ್, ಪಬ್ಸ್, ಡ್ಯಾನ್ಸ್ ಬಾರ್, ಫಾರ್ಮ್ ಹೌಸ್, ಕ್ಯಾಸಿನೊ ಮತ್ತು ಮ್ಯೂಸಿಕ್ ಪಾರ್ಟಿ ಹಾಗೆಯೇ ಈತನ ಒಡೆತನದ ಹೌಸ್ ಆಫ್ ಲೈಫ್‌ನಲ್ಲಿ ಈ ಪಾರ್ಟಿಗಳು ನಡೆಯುತ್ತಿದ್ದವಂತೆ. ವಿದೇಶದಿಂದ ತಂದ ತರಹೇವಾರಿ ಡ್ರಗ್ಸ್ ಅಲ್ಲಿ ಹೆಚ್ಚು ಹಣಕ್ಕೆ ಪೂರೈಕೆ ಆಗುತ್ತಿತ್ತು ಎಂಬುದು ವಿಚಾರಣೆಯಿಂದ ತಿಳಿದುಬಂದಿದೆ.
ಈ ಪಾರ್ಟಿಗಳಲ್ಲಿ ಸ್ಟಾರ್ ನಟ-ನಟಿಯರು, ಸಿರಿವಂತರು ಮತ್ತು ಗಣ್ಯ ವ್ಯಕ್ತಿಗಳು ಭಾಗಿಯಾಗುತ್ತಿದ್ದರಂತೆ. ಯುವಕರನ್ನು ಸೆಳೆಯಲು ಸಿನಿ ಸ್ಟಾರ್‌ಗಳಿಗೆ ಆಹ್ವಾನ ನೀಡಲಾಗುತ್ತಿದ್ದು, ಪಾರ್ಟಿಗಳಲ್ಲಿ ಎಕ್ಸ್ಟೆಸಿ ಮಾತ್ರೆಗಳು, ಗಾಂಜಾ, ಕೊಕೇನ್, ಎಂಡಿಎಂಎ, ಎಲ್ಎಸ್‌ಡಿ ಪೇಪರ್ ಬಳಕೆ ಮಾಡಲಾಗುತ್ತಿತ್ತು. ಬಂಧಿತ ರವಿಶಂಕರ್ ಹಾಗೂ ಇತರೆ ಆರೋಪಿಗಳು ಕೂಡ ಭಾಗಿಯಾಗಿ ಡ್ರಗ್ ಸಪ್ಲೈ ಮಾಡಿ ಅಧಿಕ ಹಣ ಗಳಿಸುತ್ತಿದ್ದರು ಎನ್ನಲಾಗುತ್ತಿದೆ.
ಹೌಸ್ ಆಫ್ ಲೈಫ್‌ನಲ್ಲಿ ಸಿಕ್ಕಿದ್ದೇನು?:
ಸೆಪ್ಟೆಂಬರ್ 15ರಂದು ಆದಿತ್ಯ ಆಳ್ವಾ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿರುವ ತನಿಖಾ ವರದಿಯಲ್ಲಿ ಸಂಪೂರ್ಣವಾಗಿ ಈ ವಿವರಗಳನ್ನು ತಿಳಿಸಿದ್ದಾರೆ. ಸಿಸಿಬಿ ಪೊಲೀಸರು ನಡೆಸಿದ್ದ ದಾಳಿ ವೇಳೆ 55 ಗ್ರಾಂ ಗಾಂಜಾ, 3.5 ಗ್ರಾಂ ಎಸ್ಕೆಟಸಿ ಮಾತ್ರೆ, ಸಿಸಿಟಿವಿ ಡಿವಿಆರ್ ಜಪ್ತಿ ಮಾಡಿದ್ದರು. ಆರೋಪಿ ಆದಿತ್ಯ ಆಳ್ವಾ ಮೊಬೈಲ್, ಎಲೆಕ್ಟ್ರಿಕ್ ಗ್ಯಾಡ್ಜೆಟ್ಸ್ ಮತ್ತು ಬ್ಯಾಂಕ್ ಮಾಹಿತಿಯೊಂದಿಗೆ ಎಸ್ಕೇಪ್ ಆಗಿದ್ದು, ಪೊಲೀಸರು ಆತನ ಪತ್ತೆಗೆ ಶೋಧ ನಡೆಸಿದ್ದಾರೆ.
ಆದಿತ್ಯ ಆಳ್ವಾನ ರಿಟ್ ಅರ್ಜಿಗೆ ಸಿಸಿಬಿ ಪೊಲೀಸರ ಆಕ್ಷೇಪಣೆ:
ಡ್ರಗ್ಸ್ ಪ್ರಕರಣದಲ್ಲಿ ಆದಿತ್ಯ ಆಳ್ವಾನ ಪಾತ್ರದ ಬಗ್ಗೆ ಉಲ್ಲೇಖಿಸಿದ್ದು, ಡ್ರಗ್ ಪೆಡ್ಲರ್‌ಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದಾನೆ. ಈತನ ಕಾಲ್ ಡಿಟೇಲ್ಸ್‌ನಿಂದ ಪೆಡ್ಲರ್‌ಗಳ ಜೊತೆಗಿನ ಸಂಪರ್ಕ ಪತ್ತೆಯಾಗಿದೆ.
ಕೋವಿಡ್- 19ಗೂ ಮುನ್ನವೇ ಆರೋಪಿಯ ಕಾಲ್ ರೆಕಾರ್ಡ್ಸ್, ಇ-ಮೇಲ್, ವಾಟ್ಸಪ್ ಚಾಟಿಂಗ್ ಮಾಹಿತಿ ಕಲೆ ಹಾಕಿದ್ದೇವೆ. ಆದಿತ್ಯ ಆಳ್ವಾ ಹಾಗೂ ಇತರೆ ಆರೋಪಿಗಳು ಪೆಡ್ಲರ್‌ಗಳ ಜೊತೆ ಸಂಪರ್ಕ ಹೊಂದಿರುವುದು ಈ ಮುಖಾಂತರ ಪತ್ತೆಯಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದು ಉದ್ದೇಶಪೂರ್ವಕವಾಗಿದ್ದು ಈತ ಪ್ರಮುಖ ಸಾಕ್ಷ್ಯಗಳ ನಾಶಕ್ಕೆ ಮುಂದಾಗಿದ್ದಾನೆ. ಮೊಬೈಲ್, ಬ್ಯಾಂಕ್ ಅಕೌಂಟ್ ವಿವರ, ಎಲೆಕ್ಟ್ರಿಕ್ ಗ್ಯಾಡ್ಜೆಟ್ಸ್ ವಶ ಪಡಿಸಿಕೊಳ್ಳುವುದು ಬಾಕಿ ಇದೆ. ರವಿಶಂಕರ್ ಸೇರಿದಂತೆ ಇತರೆ ಆರೋಪಿಗಳು ಆಳ್ವಾ ಡ್ರಗ್ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.