ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಯನ್ನು ಸಿಸಿಬಿ ಮುಕ್ತಾಯಗೊಳಿಸಿದೆ. ಈ ಸಂಬಂಧ ಚೈತ್ರಾ ಹಾಗೂ ಆಕೆಯ ಸಹಚರರ ವಿರುದ್ಧ ಸುಮಾರು 800 ಪುಟಗಳ ದೋಷಾರೋಪ ಪಟ್ಟಿಯನ್ನು ಸಿಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ಪ್ರಕರಣದ ಪ್ರಮುಖ ಆರೋಪಿ ಆಗಿರುವ ಚೈತ್ರಾ, ಗಗನ್, ಹಾಲಶ್ರೀ ಸ್ವಾಮೀಜಿ, ರಮೇಶ್, ಪ್ರಜ್ವಲ್, ಶ್ರೀಕಾಂತ್, ಪ್ರಸಾದ್ ಬೈಂದೂರು ಸೇರಿ 9 ಮಂದಿ ಆರೋಪಿಗಳ ವಿರುದ್ಧ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಬಿಜೆಪಿಯಿಂದ ಬೈಂದೂರು ವಿಧಾನಸಭಾಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸುಮಾರು 5 ಕೋಟಿ ರೂಪಾಯಿ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಚೈತ್ರಾ ವಿರುದ್ಧ ಗೋವಿಂದಬಾಬು ಎಂಬುವವರು ದೂರು ನೀಡಿದ್ದರು.
ಈ ಸಂಬಂಧ ತನಿಖೆ ನಡೆಸಿದ ಸಿಸಿಬಿ ಎಸಿಪಿ ರೀನಾ ಸುವರ್ಣ ನೇತೃತ್ವದಲ್ಲಿ ಚೈತ್ರಾ, ಗಗನ್, ದೇವರಾಜ್, ರಮೇಶ್, ಹಾಗೂ ಶ್ರೀಕಾಂತ್ ನನ್ನು ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದರೆ. ಅಭಿನವ ಹಾಲಶ್ರೀ ಸ್ವಾಮೀಜಿಯನ್ನ ಒಡಿಶಾದಲ್ಲಿ ಬಂಧಿಸಿ ಕರೆತರಲಾಗಿತ್ತು. ತನಿಖೆಯಲ್ಲಿ ಉದ್ಯಮಿಯನ್ನ ಉದ್ದೇಶಪೂರ್ವಕ ಹಾಗೂ ವ್ಯವಸ್ಥಿತವಾಗಿ ಸಂಚು ರೂಪಿಸಿ ವಂಚಿಸಿರುವ ಸಾಕ್ಷ್ಯಾಧಾರಗಳು ಸಿಕ್ಕಿವೆ.
ಹಣ ಪಡೆದಿರುವ ಬ್ಯಾಂಕ್ ಸ್ಟೇಟ್ ಮೆಂಟ್ ಸೇರಿದಂತೆ ಇನ್ನಿತರ ಡಿಜಿಟಲ್ ಸಾಕ್ಷ್ಯಗಳು ಲಭ್ಯವಾಗಿವೆ. ಟಿಕೆಟ್ ವಿಚಾರವಾಗಿ ಹಣ ಪಡೆಯಲು ನಿರಂತರವಾಗಿ ಉದ್ಯಮಿಯೊಂದಿಗೆ ಪೋನ್ ಸಂಪರ್ಕದಲ್ಲಿರುವುದು ಹಾಗೂ ವೈಯಕ್ತಿಕವಾಗಿ ಭೇಟಿ ಮಾಡಿರುವುದು ಗೊತ್ತಾಗಿದೆ. ಆರೋಪಿಗಳು ಒಳಸಂಚು ನಡೆಸಿ ವಂಚಿಸಿರುವುದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಗಳೂರು, ಚಿಕ್ಕಮಗಳೂರಿನಲ್ಲಿ ಸ್ಥಳ ಮಹಜರು ನಡೆಸಿ ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನ ಕಲೆಹಾಕಿರುವ ಬಗ್ಗೆ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಿರುವ ಬಗ್ಗೆ ಸಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಮಂಗಳೂರು: ವಂಚಕರ ಬಲೆಗೆ ಬಿದ್ದು ₹72 ಲಕ್ಷ ಪಿಂಚಣಿ ಹಣ ಕಳೆದುಕೊಂಡ ನಿವೃತ್ತ ಪ್ರಾಂಶುಪಾಲೆ
ಉದ್ಯಮಿ ಗೋವಿಂದ ಬಾಬು ವಿರುದ್ಧ ಇಡಿಗೆ ದೂರು: ಇದರ ನಡುವೆ, ಪ್ರಕರಣದ ದೂರದಾರನಿಗೆ 5 ಕೋಟಿ ರೂಪಾಯಿ ಎಲ್ಲಿಂದ ಬಂದಿದೆ ಎನ್ನುವ ಬಗ್ಗೆ ತನಿಖೆ ನಡೆಸಬೇಕೆಂದು ಕೋರಿ ವಕೀಲರೊಬ್ಬರು ಜಾರಿ ನಿರ್ದೇಶನಾಲಯಕ್ಕೆ ಇತ್ತೀಚೆಗೆ ದೂರು ನೀಡಿದ್ದರು. ಗೋವಿಂದ ಬಾಬು ಪೂಜಾರಿ ತಮ್ಮ ದೂರಿನಲ್ಲೇ 5 ಕೋಟಿ ನಗದು ಹಣ ಕೊಟ್ಟಿರುವುದಾಗಿ ಹೇಳಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಹಣ ಹವಾಲಾ ಮಾರ್ಗದಿಂದ ಬಂದಿರುವ ಕುರಿತು ದೂರುದಾರರು ಅನುಮಾನ ವ್ಯಕ್ತಪಡಿಸಿದ್ದರು.
ಈ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ತನಿಖೆ ಮಾಡಿ ಹಣದ ಬಗ್ಗೆ ವಿಚಾರಣೆ ನಡೆಸಬೇಕು. ಬ್ಯಾಂಕ್ನಿಂದ ಸಾಲ ಪಡೆದಿರುವುದಾಗಿ ಗೋವಿಂದ್ ಪೂಜಾರಿ ಹೇಳಿದ್ದಾರೆ. ಹಣವನ್ನು ಸಾಲ ಪಡೆದು ಈ ರೀತಿ ಬಳಸಿಕೊಳ್ಳುವುದು ಕೂಡ ತಪ್ಪು ಆಗಿದೆ. ಇವರು ಮುಂಬೈನಲ್ಲಿ ಉದ್ಯಮ ಮಾಡುತ್ತಿರುವುದರಿಂದ ಇದು ಹವಾಲಾ ವಹಿವಾಟು ಎಂಬುದರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವಕೀಲ, ಸೆ.21ರಂದು ಇಡಿಗೆ ದೂರು ಸಲ್ಲಿಸಿದ್ದರು.