ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ನಗರದಲ್ಲಿ 2 ಸಾವಿರಕ್ಕೂ ಹೆಚ್ಚು ರೌಡಿ ಮನೆಗಳ ಮೇಲೆ ದಾಳಿ ಮಾಡಿದ್ದ ಪೊಲೀಸರು, ಮುಂದುವರಿದ ಭಾಗವಾಗಿ ಅಪರಾಧ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದ ನಾಲ್ವರು ರೌಡಿಗಳು ಹಾಗೂ ಅವರ ಸಹಚರರ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ಈ ಹಿಂದಿನ ದಾಳಿಯಲ್ಲಿ ತಲೆ ಮರೆಸಿಕೊಂಡಿದ್ದ ರೌಡಿಶೀಟರ್ಗಳಿಗೆ ಬೆಳ್ಳಂ ಬೆಳಗ್ಗೆ ಸಿಸಿಬಿ ಶಾಕ್ ನೀಡಿದೆ. 55 ಜನ ರೌಡಿಶೀಟರ್ಗಳಿಗೆ ಸೇರಿದ 45 ಕಡೆ ದಾಳಿ ನಡೆಸಿದೆ. ರೌಡಿಶೀಟರ್ಗಳಾದ ಸೈಲೆಂಟ್ ಸುನಿಲ, ವಿಲ್ಸನ್ ಗಾರ್ಡನ್ ನಾಗ, ಜೆಸಿಬಿ ನಾರಾಯಣ, ಸೈಕಲ್ ರವಿ ಈ ನಾಲ್ಕು ಗ್ಯಾಂಗ್ಗಳ 58 ಜನ ರೌಡಿಗಳ ಲಿಸ್ಟ್ ಮಾಡಿ ಇಂದು ಸಿಸಿಬಿ ದಾಳಿ ನಡೆಸಿದೆ.
ಕಲಾಸಿಪಾಳ್ಯ ಠಾಣೆ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ನಿವಾಸದಲ್ಲಿ 2 ಲಕ್ಷ ರೂ. ನಗದು ಹಾಗೂ ಡ್ಯಾಗರ್ಗಳು ಪತ್ತೆಯಾಗಿವೆ. ಸೈಲೆಂಟ್ ಸುನಿಲ, ಜೆಸಿಬಿ ನಾರಾಯಣ ಹಾಗೂ ಸೈಕಲ್ ರವಿ ನಿವಾಸದ ಮೇಲೆ ರೇಡ್ ಮಾಡುವಾಗ ಮನೆಯಲ್ಲಿರದೇ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸೈಕಲ್ ರವಿ ನಿವಾಸದಲ್ಲಿ ತಮಿಳುನಾಡಿನ ಪ್ರಾಪರ್ಟಿಗೆ ಸಂಬಂಧಿಸಿದ ದಾಖಲೆ ಹಾಗೂ ಹಣ ವರ್ಗಾವಣೆ ಮಾಡಿರುವ ದಾಖಲೆಗಳು ಪತ್ತೆಯಾಗಿವೆ. ಸೈಕಲ್ ರವಿ ಅಸೋಸಿಯೇಟ್ ಹಾಗೂ ಶಿವಾಜಿನಗರ ಠಾಣೆ ರೌಡಿಶೀಟರ್ ಶಹನಾಜ್ ನಿವಾಸದಲ್ಲಿ 254 ಆಧಾರ್ ಕಾರ್ಡ್ಗಳು ಹಾಗೂ ನಗರದ ಕೆಲ ಬೇನಾಮಿ ಆಸ್ತಿ ಪತ್ರಗಳು ದೊರೆತಿವೆ.
ರೌಡಿಶೀಟರ್ ನಿವಾಸಗಳ ಮೇಲಿನ ದಾಳಿಗೆ ಸಿಸಿಬಿ ಜಂಟಿ ಆಯುಕ್ತ ಪ್ರತಿಕ್ರಿಯೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಪ್ರತಿಕ್ರಿಯೆ
ಈ ಬಗ್ಗೆ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾತನಾಡಿ, ಕಳೆದ ವಾರ ರೌಡಿಗಳ ಮನೆ ಹಾಗೂ ಜೈಲಿನ ಮೇಲೆ ದಾಳಿ ಮಾಡಿದ್ದೆವು. ಈ ವೇಳೆ, ಮಾರಕಾಸ್ತ್ರ ಹಾಗೂ ಗಾಂಜಾ ಜಪ್ತಿ ಮಾಡಿದ್ದೆವು. ಕ್ರೈಂನಲ್ಲಿ ಸಕ್ರಿಯವಾಗಿರುವ ಪ್ರಮುಖ ರೌಡಿಗಳ ಪಟ್ಟಿ ತಯಾರಿಸಿ ಇಂದು ಬೆಳಗ್ಗೆ ನಾಲ್ವರು ಪ್ರಮುಖ ರೌಡಿಗಳ ಮನೆ ಹಾಗೂ ಅವರ ಸಹಚರರ ಮೇಲೆ ದಾಳಿ ನಡೆಸಿದ್ದೇವೆ. ದಾಳಿ ವೇಳೆ, 254 ಆಧಾರ್ ಕಾರ್ಡ್, 2 ಲಕ್ಷ ರೂ.ನಗದು ಹಾಗೂ ಮಾರಕಾಸ್ತ್ರ ಪತ್ತೆಯಾಗಿವೆ. 20 ಜನರನ್ನ ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.