ಬೆಂಗಳೂರು :ನಗರದಲ್ಲಿ ಬಂಧಿತರಾದಶ್ರೀಲಂಕಾ ಮೂಲದ ಮೂವರು ಕಿಲ್ಲರ್ಗಳಿಗೆ ಹಣದ ನೆರವು ನೀಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ಮನ್ಸೂರ್ ಮತ್ತು ಬೆಂಗಳೂರಿನ ವಿವೇಕ ನಗರದ ಅನ್ಬಳಗನ್ ಎಂಬುವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮನ್ಸೂರ್ ಬಳಿ 57 ಲಕ್ಷ ರೂ. ನಗದು ಹಣ, 1.5 ಕೋಟಿ ರೂಪಾಯಿ ಡಿ.ಡಿ ವಶಕ್ಕೆ ಪಡೆಯಲಾಗಿದೆ. ಬಂಧಿತ ಆರೋಪಿಗಳಿಗೆ ಬೆಂಗಳೂರಿನಲ್ಲಿ ನೆಲೆಸಲು ಅಗತ್ಯ ಖರ್ಚು ವೆಚ್ಚ ಎಂದು ಸುಮಾರು 57 ಲಕ್ಷ ರೂ. ಹೊಂದಿಸಿದ್ದ ಮನ್ಸೂರ್, ಕೆಲವೇ ದಿನಗಳಲ್ಲಿ ಆ ಹಣವನ್ನು ಆರೋಪಿಗಳಿಗೆ ತಲುಪಿಸಲು ಸಿದ್ಧತೆ ನಡೆಸಿದ್ದ. ಹಣ ತಮ್ಮ ಕೈ ಸೇರಿದ ಬಳಿಕ ಬೆಂಗಳೂರಿನಿಂದ ಇತರೆಡೆಗೆ ತೆರಳಲು ಆರೋಪಿಗಳು ಸಜ್ಜಾಗಿದ್ದರು ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ.
ವಿದೇಶಕ್ಕೆ ತೆರಳಲು ಸಿದ್ಧತೆ:ಆರೋಪಿಗಳು ಸಮುದ್ರ ಮಾರ್ಗದ ಮೂಲಕ ತಮಿಳುನಾಡಿನ ಸೇಲಂನಿಂದ ಬೆಂಗಳೂರಿಗೆ ಬರಲು ನೆರವಾಗಿದ್ದ ಜಲಾಲ್ ಎಂಬಾತನ ಮಾರ್ಗದರ್ಶನದಂತೆ ಮನ್ಸೂರ್ ಕೆಲಸ ನಿರ್ವಹಿಸುತ್ತಿದ್ದ. ಒಮಾನ್ನಲ್ಲಿರುವ ಜಲಾಲ್, ಬೆಂಗಳೂರಿನಲ್ಲಿರುವ ಆರೋಪಿಗಳಿಗೆ 50 ಲಕ್ಷ ರೂ. ನೀಡುವಂತೆ ಮನ್ಸೂರ್ಗೆ ಸೂಚಿಸಿದ್ದ. ಅದರಂತೆ ಬೆಂಗಳೂರಿಗೆ ಬಂದ ಶ್ರೀಲಂಕಾ ಮೂಲದ ಆರೋಪಿಗಳಿಗೆ ಹಣ ನೀಡಲು ಮನ್ಸೂರ್ ಸಿದ್ಧವಾಗಿದ್ದ. ಇತ್ತ ಅನ್ಬಳಗನ್ ಬೆಂಗಳೂರಿನಲ್ಲಿ ಪಾಸ್‌ಪೋರ್ಟ್ ಸಿದ್ಧಪಡಿಸಿ ಕೊಡುವ ಕೆಲಸಕ್ಕೆ ನಿಯೋಜನೆಯಾಗಿದ್ದ. ಅದಕ್ಕೆ ಬೇಕಾದ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಆತನನ್ನ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಣ ಪಡೆದು ನೇಪಾಳದಲ್ಲಿರುವ ಸಂಜೀವ್ ಎಂಬಾತನ ಜೊತೆ ಸೇರಿಕೊಳ್ಳಲು ಆರೋಪಿಗಳು ಸಿದ್ಧವಾಗಿದ್ದರು. ಸಂಜೀವ್ ಜೊತೆ ಆರೋಪಿಗಳು ಸಿಂಹಳೀಯ ಭಾಷೆಯಲ್ಲಿ ನಡೆಸಿರುವ ಮೊಬೈಲ್ ಸಂಭಾಷಣೆ ಸಹ ಲಭಿಸಿದೆ. ಬಂಧಿತ ಆರೋಪಿಗಳಿಗೆ ಸಿಂಹಳೀಯ ಭಾಷೆ ಮಾತ್ರ ತಿಳಿದಿದೆ. ಆದ್ದರಿಂದ ಭಾಷಾಂತರ ಮಾಡುುವವರ ನೆರವು ಪಡೆಯಲಾಗುತ್ತಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಡಾ. ಎಸ್.ಡಿ. ಶರಣಪ್ಪ ಅವರು ತಿಳಿಸಿದ್ದಾರೆ.