ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಾಯಿಕೊಡೆಗಳಂತೆ ನಕಲಿ ಅಂಕಪಟ್ಟಿ ಜಾಲ ದಿನೇ ದಿನೇ ಪ್ರಬಲವಾಗುತ್ತಿದೆ. ಹಣ ಕೊಟ್ಟರೆ ಪರೀಕ್ಷೆ ಬರೆಸದೆ ನಕಲಿ ಮಾರ್ಕ್ಸ್ ಕಾರ್ಡ್ ನೀಡುವ ದಂಧೆ ಸಕ್ರಿಯವಾಗಿದೆ. ಇದಕ್ಕೆ ಪೂರಕವೆಂಬಂತೆ ಖಾಸಗಿ ಇನ್ಸ್ಟಿಟ್ಯೂಟ್ ಮೇಲೆ ದಾಳಿ ನಡೆಸಿ ಅಕ್ರಮ ಜಾಲವನ್ನ ಸಿಸಿಬಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.
ಅಸಲಿ ಎಂಬಂತೆ ಬಿಂಬಿಸಿ ಪಿಯುಸಿ, ಪದವಿ ಸೇರಿ ವಿವಿಧ ರೀತಿಯ ನಕಲಿ ಅಂಕಪಟ್ಟಿಗಳನ್ನು ಸಿದ್ಧಪಡಿಸಿ, ಲಕ್ಷಾಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು. ಸದ್ಯ ವೆಂಕಟೇಶ್ವರ ಇನ್ ಸ್ಟಿಟ್ಯೂಟ್ ಸಂಸ್ಥೆಯ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಹಣ ಕೊಟ್ಟರೆ ಇಲ್ಲಿ ಸಿಗುತ್ತೆ ಫೇಕ್ ಮಾರ್ಕ್ಸ್ ಕಾರ್ಡ್ ಕಳೆದ ಐದು ವರ್ಷಗಳಿಂದ ವಿಎಸ್ಎಸ್ ಸಂಸ್ಥೆಯ ವೆಬ್ ಸೈಟ್ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್, ಶಾರದಾ, ಶಿಲ್ಪ ಹಾಗೂ ರಾಜಣ್ಣ ಎಂಬುವರನ್ನು ಬಂಧಿಸಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಸಿಕ್ಕಿಂ, ಪಶ್ಚಿಮ ಬಂಗಾಳ ಸೇರಿದಂತೆ 20ಕ್ಕೂ ಹೆಚ್ಚು ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಹೆಸರಿನ 1 ಸಾವಿರಕ್ಕೂ ಹೆಚ್ಚು ನಕಲಿ ಅಂಕಪಟ್ಟಿ ಹಾಗೂ 70ಕ್ಕೂ ಸೀಲು, ಹಾರ್ಡ್ ಡಿಸ್ಕ್, ಪ್ರಿಂಟರ್, ಮೊಬೈಲ್ಗಳನ್ನ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ.
ಮಹಾಲಕ್ಷ್ಮೀ ಲೇಔಟ್ ಸೇರಿ ಮೂರು ಕಡೆಗಳಲ್ಲಿ ಕಚೇರಿಗಳನ್ನ ತೆರೆದು ಆನ್ಲೈನ್ ಮುಖಾಂತರ ಜಾಹೀರಾತು ನೀಡುತ್ತಿತ್ತು. ಮಾರ್ಕ್ಸ್ ಕಾರ್ಡ್ ಅಗತ್ಯವಿರುವವರಿಗೆ ಸಂಪರ್ಕಿಸುತ್ತಿದ್ದ ಆರೋಪಿಗಳು ಹಣ ನೀಡಿದ ಆಭ್ಯರ್ಥಿಗಳಿಗೆ ರಾಜ್ಯ-ಅಂತಾರಾಜ್ಯ ವಿವಿಗಳ ಮಾರ್ಕ್ಸ್ ಕಾರ್ಡ್ಗಳನ್ನ ಸಿದ್ಧಪಡಿಸಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದರಂತೆ.
ಇದನ್ನೂ ಓದಿ:ನಾಲ್ಕು ಮಕ್ಕಳ ಎದುರೇ ಹೆಂಡ್ತಿ ಮೇಲೆ ಅತ್ಯಾಚಾರ: ಖಾಸಗಿ ಅಂಗಕ್ಕೆ ಪ್ಲಾಸ್ಟಿಕ್ ಪೈಪ್ ಇಟ್ಟು ವಿಕೃತಿ!
ಇತ್ತೀಚೆಗೆ ಯುವಕನೋರ್ವನನ್ನು ಸಂಪರ್ಕಿಸಿದ ಆರೋಪಿಗಳು ಪರೀಕ್ಷೆಯಿಲ್ಲದೆ ಡಿಗ್ರಿ ಮಾರ್ಕ್ಸ್ ಕಾರ್ಡ್ ಬೇಕಾದರೆ ಒಂದು ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಇದರಂತೆ ಆರೋಪಿಗಳು ಯುವಕನ ವಾಟ್ಸಾಪ್ ನಂಬರ್ಗೆ ಫೇಕ್ ಮಾರ್ಕ್ಸ್ ಕಾರ್ಡ್ ಕಳುಹಿಸಿದ್ದರು. ಇದರಿಂದ ಅನುಮಾನಗೊಂಡ ಯುವಕ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದ. ಈ ದೂರು ಆಧರಿಸಿ ಮಹಾಲಕ್ಷ್ಮೀ ಲೇಔಟ್ನ ಕೇಂದ್ರ ಕಚೇರಿ ಸೇರಿ ಮೂರು ಕಚೇರಿಗಳ ಮೇಲೆ ದಾಳಿ ನಡೆಸಿದಾಗ ಅಕ್ರಮ ಜಾಲ ಬೆಳಕಿಗೆ ಬಂದಿದೆ.
ಪ್ರತಿಷ್ಠಿತ ಹಾಗೂ ವಿವಿಗಳ ಎಸ್ಎಸ್ಎಲ್ಸಿ, ಪಿಯುಸಿ, ಎಂಜಿನಿಯರಿಂಗ್, ಬಿಬಿಎಂ ಸೇರಿ ಪದವಿ ಅಂಕಪಟ್ಟಿ ನೀಡುವುದಾಗಿ ವಿದ್ಯಾರ್ಥಿಗಳಿಂದ ಒಂದು ಮಾರ್ಕ್ಸ್ ಕಾರ್ಡ್ಗೆ 50 ಸಾವಿರದಿಂದ 1 ಲಕ್ಷವರೆಗೆ ಹಣ ಪಡೆದುಕೊಳ್ಳುತ್ತಿದ್ದರು. ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಸದೆ ರಾಜ್ಯ ಹಾಗೂ ಹೊರರಾಜ್ಯ ವಿವಿಗಳ ನಕಲಿ ಮಾರ್ಕ್ಸ್ ಕಾರ್ಡ್ ಗಳನ್ನ ನೀಡುತ್ತಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.