ಬೆಂಗಳೂರು : ಸ್ಯಾಂಡಲ್‌ವುಡ್ ಡ್ರಗ್ಸ್ ಜಾಲ ನಂಟು ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ಆದಿತ್ಯ ಆಳ್ವಾ ವಿರುದ್ಧ ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಬಾರದು ಎಂದು ಸಿಸಿಬಿ ಪೊಲೀಸರು ಹೈಕೋರ್ಟ್‌ಗೆ ಲಿಖಿತ ಮನವಿ ಮಾಡಿದ್ದಾರೆ.
ಡ್ರಗ್ ಜಾಲ ಪ್ರಕರಣ: ಆದಿತ್ಯ ಆಳ್ವಾ ವಿರುದ್ಧದ ಎಫ್ಐಆರ್ ರದ್ದು ಪಡಿಸದಂತೆ ಸಿಸಿಬಿ ಮನವಿ
ಎಫ್ಐಆರ್ ರದ್ದುಕೋರಿ ಡ್ರಗ್ ಪ್ರಕರಣದ ಆರೋಪಿ ಆದಿತ್ಯಾ ಆಳ್ವಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ನಲ್ಲಿ ನಡೆಯಿತು. ಈ ವೇಳೆ, ಸಿಸಿಬಿ ಪರ ವಿಶೇಷ ಅಭಿಯೋಜಕರು ಹಾಜರಾಗಿ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಆದಿತ್ಯಾ ಆಳ್ವಾ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಸಿಸಿಬಿ ಪರ ವಿಶೇಷ ಅಭಿಯೋಜಕರು ಹಾಜರಾಗಿ ಅರ್ಜಿಗೆ ಲಿಖಿತ ಆಕ್ಷೇಪಣೆ ಸಲ್ಲಿಸಿದರು.
ಬಳಿಕ ವಾದ ಮಂಡಿಸಿ, ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಪ್ರಕರಣದಲ್ಲಿ ಆದಿತ್ಯ ಆಳ್ವಾ ಭಾಗಿಯಾಗಿದ್ದಾರೆ. ಡ್ರಗ್ಸ್ ಪೆಡ್ಲರ್ ಆಗಿರುವ ಆಳ್ವಾ, ಇತರ ಆರೋಪಿಗಳಿಗೆ ಮಾದಕ ವಸ್ತು ಮಾರಾಟ ಮಾಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ಸೇವನೆ ಮಾಡಿರುವ ಬಗ್ಗೆಯೂ ತನಿಖೆ ವೇಳೆ ತಿಳಿದು ಬಂದಿದೆ. ಸದ್ಯ ತಲೆ ಮರೆಸಿಕೊಂಡಿರುವ ಆಳ್ವಾರನ್ನು ಪತ್ತೆ ಹಚ್ಚಲು ಸಿಸಿಬಿ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಬೇಕಿದೆ.
ಅಲ್ಲದೇ, ಆದಿತ್ಯಾ ಆಳ್ವಾ ವಿರುದ್ಧದ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಇಂತಹ ಸಂದರ್ಭದಲ್ಲಿ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿರುವುದು ಅಪ್ರಸ್ತುತವಾಗಿದೆ. ಒಂದೊಮ್ಮೆ ಕೋರ್ಟ್, ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸಿದರೆ ಅಥವಾ ತಡೆಯಾಜ್ಞೆ ನೀಡಿದರೆ ತನಿಖೆಗೆ ಅಡ್ಡಿಯಾಗಲಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ಆಕ್ಷೇಪಣೆ ಹಾಗೂ ವಾದ ದಾಖಲಿಸಿಕೊಂಡ ಪೀಠ, ವಿಚಾರಣೆ ಮುಂದೂಡಿತು.