ಕರ್ನಾಟಕ

karnataka

ETV Bharat / state

ಪ್ರಕರಣ ಇತ್ಯರ್ಥವಾಗುವವರೆಗೂ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಆದೇಶಿಸಿದ ಸಿಬಿಐ ವಿಶೇಷ ಕೋರ್ಟ್​​​

ಜನಾರ್ದನ ರೆಡ್ಡಿ ಮತ್ತು ಪತ್ನಿ ಅರುಣಾಗೆ ಸೇರಿದ ಆಸ್ತಿ ಜಪ್ತಿ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಜನಾರ್ದನ ರೆಡ್ಡಿ
ಜನಾರ್ದನ ರೆಡ್ಡಿ

By

Published : Jun 13, 2023, 11:22 AM IST

Updated : Jun 13, 2023, 12:11 PM IST

ಬೆಂಗಳೂರು: ಶಾಸಕ ಜನಾರ್ದನ ರೆಡ್ಡಿ ವಿರುದ್ಧದ ಕ್ರಿಮಿನಲ್ ಪ್ರಕರಣ ಇತ್ಯರ್ಥವಾಗುವವರೆಗೂ ಅವರ ಮತ್ತು ಅವರ ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿಗೆ ಸೇರಿದ ಆಸ್ತಿಯನ್ನ ಜಪ್ತಿ ಮಾಡುವಂತೆ ಸಿಬಿಐನ ವಿಶೇಷ ನ್ಯಾಯಾಲಯ​ ಆದೇಶಿಸಿದೆ. ಜನಾರ್ದನ ರೆಡ್ಡಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣ ಮುಗಿಯುವವರೆಗೆ ಅವರ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಹಿಂದೆ ಜನಾರ್ದನ ರೆಡ್ಡಿ ದಂಪತಿ ಒಡೆತನದ ಒಟ್ಟು 124 ಆಸ್ತಿಗಳ ಜಪ್ತಿ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಸದ್ಯ ನ್ಯಾಯಾಲಯ ಭ್ರಷ್ಟಾಚಾರ ತಡೆ ಕಾಯ್ದೆ, ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯಡಿ ರೆಡ್ಡಿ ದಂಪತಿಯ ಒಟ್ಟು 77 ಆಸ್ತಿಗಳನ್ನು ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ.

ಹೈಕೋರ್ಟ್​​ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿದ್ದ ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಇದೇ ವರ್ಷದ ಜನವರಿ 12ರಂದು ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಗೃಹ ಇಲಾಖೆ ಅನುಮತಿ ನೀಡಿತ್ತು. ಕಳೆ‌ದ ವರ್ಷ ಆಗಸ್ಟ್ ತಿಂಗಳಲ್ಲಿ ತೆಲಂಗಾಣ, ಆಂಧ್ರಪ್ರದೇಶದಲ್ಲಿನ ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಸಿಬಿಐ ಅನುಮತಿ ಕೇಳಿತ್ತು. ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಕರ್ನಾಟಕ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಸಿಬಿಐ ಹೈಕೋರ್ಟ್ ಮೆಟ್ಟಿಲೇರಿತ್ತು.

ರೆಡ್ಡಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೋರ್ಟ್​ ಆದೇಶ:ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನವೇ ಅಕ್ರಮ ಅದಿರು ಮಾರಾಟ ಪ್ರಕರಣದಲ್ಲಿ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಅಕ್ರಮ ಗಣಿ ಅದಿರು ಮಾರಾಟ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜನಾರ್ದನ ರೆಡ್ಡಿ, ಕಾಂಗ್ರೆಸ್ ಶಾಸಕ ನಾಗೇಂದ್ರ ಸೇರಿದಂತೆ 16 ಮಂದಿ ವಿರುದ್ಧ ಗಣಿ ಮತ್ತು ಖನಿಜ ಅಭಿವೃದ್ಧಿ ನಿಯಂತ್ರಣಗಳ ಕಾಯ್ದೆ 1957 ಅಡಿ, ಸೆಕ್ಷನ್ 21 ಮತ್ತು 23 ಜೊತೆಗೆ 4(1), 4(1ಎ) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲು ನ್ಯಾಯಾಲಯ ತಿಳಿಸಿತ್ತು.

2008 ಹಾಗೂ 2011ರ ಅವಧಿಯಲ್ಲಿ ಕಬ್ಬಿಣದ ಅದಿರು ಮಾರಾಟ ಪ್ರಕರಣದಲ್ಲಿ ರಾಜ್ಯದ ಬೊಕ್ಕಸಕ್ಕೆ 211 ಕೋಟಿ ರೂ. ನಷ್ಟ ಉಂಟು ಮಾಡಿದ ಆರೋಪದ ಸಂಬಂಧ ದೂರು ದಾಖಲಾಗಿತ್ತು. ರಾಜ್ಯ ಸರ್ಕಾರಕ್ಕೆ ರಾಯಲ್ಟಿ ಹಾಗೂ ಸೆಸ್ ಪಾವತಿ ತಪ್ಪಿಸಲು ಆರೋಪಿಗಳು ತಂತ್ರ ರೂಪಿಸಿದ್ದರು ಎಂದು ತಿಳಿದು ಬಂದಿತ್ತು. ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಮೊದಲ ಆರೋಪಿಯಾಗಿದ್ದಾರೆ.

ಇದನ್ನೂ ಓದಿ:ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನರಿಂದ ಒಂದೇ ದಿನ 522 ಪ್ರಕರಣಗಳ ವಿಚಾರಣೆ

Last Updated : Jun 13, 2023, 12:11 PM IST

ABOUT THE AUTHOR

...view details