ಬೆಂಗಳೂರು: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ವಿವಿಧ ದೇಶಗಳಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎನ್ನಲಾದ ಆರೋಪ ಸಂಬಂಧದ ಬಂಡವಾಳವನ್ನು ಪತ್ತೆ ಹಚ್ಚಲು ತನಿಖಾ ಸಂಸ್ಥೆಗೆ ಸಹಾಯ ಮಾಡುವಂತೆ ವಿವಿಧ ನಾಲ್ಕು ದೇಶಗಳ ಸಕ್ಷಮ ಪ್ರಾಧಿಕಾರಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ಮನವಿ ಮಾಡಿದೆ.
ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಇ.ಇಂದ್ರಕಲಾ ಅವರು ಸ್ವಿಡ್ಜರ್ಲೆಂಡ್, ಸಿಂಗಾಪುರ, ಯುಎಇ ಮತ್ತು ಐಲ್ ಆಫ್ ಮ್ಯಾನ್ ದೇಶಗಳ ನ್ಯಾಯಾಂಗ ಅಧಿಕಾರಿಗಳಿಗೆ ಪತ್ರದ ಮೂಲಕ ಮಾಹಿತಿ ಕೋರಿದ್ದಾರೆ. ಆರೋಪಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 166(ಎ) ಪ್ರಕಾರ ಮನವಿ ಮಾಡುತ್ತಿದ್ದು, ಈ ಪ್ರಕರಣದಲ್ಲಿ ತನಿಖೆಗೆ ಸಹಕಾರ ನೀಡುವುದಕ್ಕಾಗಿ ಕೋರುತ್ತಿರುವುದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
ಸಿಬಿಐ ತನಿಖಾಧಿಕಾರಿಗಳು ಜಿಎಲ್‌ಎ (ಗಾಲಿ ಜನಾರ್ದನ ರೆಡ್ಡಿ) ಟ್ರೇಡಿಂಗ್ ಇಂಟರ್ ನ್ಯಾಶನಲ್ ಪ್ರೈವೆಟ್ ಲಿಮಿಟೆಡ್‌ನ ಸಂಯೋಜನೆಯ ವಿವರಗಳಂತಹ ಮಾಹಿತಿಯನ್ನು ಸಂಗ್ರಹಿಸಲು ನ್ಯಾಯಾಂಗದ ಸಹಾಯವನ್ನು ಕೋರಿದೆ. ಈ ನಿಟ್ಟಿನಲ್ಲಿ ಮನವಿ ಮಾಡಲಾಗುತ್ತಿದೆ ಎಂದು ನ್ಯಾಯಾಧೀಶರು ಕೋರಿದ್ದಾರೆ. ಜಿಎಲ್‌ಎ ಕಂಪೆನಿಯ ಸ್ವರೂಪ, ಬ್ಯಾಂಕ್ ಖಾತೆಗೆ ಸಂಬಂಧಿಸಿದ ವಿವರ, ಮಾಲೀಕರು ಮತ್ತು ಅಧಿಕೃತವಾಗಿ ಸಹಿ ಹಾಕಿರುವ ವ್ಯಕ್ತಿಯ ವಿವರ, ಅದರ ಮುಂದಿನ ಫಲಾನುಭವಿಗಳು, ಕಂಪೆನಿಯ ಷೇರುಗಳ ವಿವರ, ಅದನ್ನು ಖರೀದಿ ಮಾಡಿರುವವರು ಮತ್ತು ಮಾರಾಟ ಮಾಡಿರುವವರು, ಕಂಪೆನಿಯ ನಿರ್ದೇಶಕರು ಮತ್ತು ಷೇರುದಾರರ ವಿವರ ಸೇರಿದಂತೆ ಲಭ್ಯವಿರುವ ಎಲ್ಲ ಮಾಹಿತಿಯನ್ನು ಒದಗಿಸುವಂತೆ ಕೋರ್ಟ್ ಕೇಳಿದೆ.