ಬೆಂಗಳೂರು:"ಆದಾಯ ತೆರಿಗೆ ಇಲಾಖೆ(ಐಟಿ) ದಾಳಿಯಲ್ಲಿ ಕೋಟ್ಯಂತರ ಹಣ ಪತ್ತೆಯಾಗಿದೆ. ಈ ಪ್ರಕರಣದ ಪರ್ದೇ ಕೆ ಪೀಚೆ ಯಾವ ನಾಯಕರಿದ್ದಾರೋ, ಅವರ ಮುಖ ಹೊರಗೆ ಬರಬೇಕಾದರೆ ಪ್ರಕರಣದ ಸಿಬಿಐ ತನಿಖೆಯಾಗಬೇಕು. ಆಗ ಕಾಂಗ್ರೆಸ್ನ ಮುಖ ಕಳಚಲಿದೆ. ಅದಕ್ಕಾಗಿ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ಮಾಜಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಎಚ್ಚರಿಕೆ ನೀಡಿದರು.
ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, "ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ವಿರುದ್ಧ ಕಲ್ಲಿದ್ದಲು ಹಗರಣ ಸೇರಿದಂತೆ ಬರೀ ಹಗರಣಗಳು, ಭ್ರಷ್ಟಾಚಾರ ಆಪಾದನೆಗಳೇ ಬಂದವು. ಇದರ ವಿರುದ್ಧ ನಿಂತ ಬಿಜೆಪಿ, ಕಾಂಗ್ರೆಸ್ ಮುಕ್ತ ಭಾರತಕ್ಕೆ ಸಂಕಲ್ಪ ಮಾಡಿತು. ಕಾಂಗ್ರೆಸ್ ಮುಕ್ತ ಭಾರತ ಮಾಡುವಲ್ಲಿ ಬಹುತೇಕ ಸಫಲವಾದೆವು. ಆದರೆ ಕರ್ನಾಟಕ ಕಾಂಗ್ರೆಸ್ ಮುಕ್ತ ಆಗಿದ್ದರೆ, ಈ ಸ್ಥಿತಿ ಬರುತ್ತಿರಲಿಲ್ಲ. ಆದರೆ ಆಸೆ ಆಮಿಷ ತೋರಿಸಿ, ಜನರ ಹಾದಿ ತಪ್ಪಿಸಿ ಅಧಿಕಾರಕ್ಕೆ ಬಂದಿದೆ" ಎಂದು ಟೀಕಿಸಿದರು.
"ನಮ್ಮ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಜತೆ ಸಣ್ಣ ಒಪ್ಪಂದ ಮಾಡಿಕೊಂಡಿದ್ದಾರೆ. ನೀವು ಸಿಎಂ ಭೇಟಿ ಮಾಡಿ ಗುತ್ತಿಗೆದಾರ ಅಂಬಿಕಾಪತಿ ಮನೆಗೆ ಯಾಕೆ ಹೋಗಿದ್ದೀರಿ? ಆತ ನಿಮ್ಮ ಉಪಾಧ್ಯಕ್ಷರಲ್ಲವೇ? ನೀವು ಅವರಿಗೆ ಮಾರ್ಗದರ್ಶನ ಮಾಡಲು ಹೋಗಿದ್ದೀರಾ ಅಥವಾ ಮಾರ್ಗದರ್ಶನ ಪಡೆಯಲು ಹೋಗಿದ್ದಿರಾ" ಎಂದರು.
"ಶಾಸಕರ ಜತೆ ಸತೀಶ್ ಜಾರಕಿಹೊಳಿ ದಸರಾ ಪ್ರವಾಸಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ಅಂತಹ ಆದೇಶ ಭ್ರಷ್ಟಾಚಾರದ ವಿಚಾರದಲ್ಲಿ ಏಕಿಲ್ಲ? ಇದು ಬಿಜೆಪಿಯ ಹಣ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇವರ ಸರ್ಕಾರ, ಇವರ ಪಕ್ಷ, ಇವರು ಬಿಡುಗಡೆ ಮಾಡಿದ ಹಣದ ಕಮಿಷನ್, ಇವರೆಲ್ಲಾ ಬೇರೆ ರಾಜ್ಯಕ್ಕೆ ಹಣ ಕಳಿಸಿದ್ದಾರೆ. ಈಗ ಈ ಹಣ ಬಿಜೆಪಿಯದ್ದು ಎನ್ನುತ್ತಾರೆ. ಸಾಕಷ್ಟು ಕೇಸ್ ಸಿಬಿಐಗೆ ವಹಿಸಿದ್ದೇ ಎನ್ನುತ್ತೀರಲ್ಲ, ಸಿದ್ದರಾಮಯ್ಯ ಅವರೇ ಈ ಪ್ರಕರಣವನ್ನೂ ಸಿಬಿಐಗೆ ಕೊಟ್ಟು ನಿಮ್ಮ ಸಾಚಾತನ ಸಾಬೀತುಪಡಿಸಿ" ಎಂದು ಆಗ್ರಹಿಸಿದರು.
"ಬಿಜೆಪಿಯನ್ನು ತಿರಸ್ಕರಿಸಿ ನಿಮ್ಮನ್ನು ಜನ ಆಯ್ಕೆ ಮಾಡಲಿಲ್ಲ. ನೀವು ಕೊಟ್ಟ ಸುಳ್ಳು ಆಶ್ವಾಸನೆಗಳಿಗೆ ಭರವಸೆಗಳಿಗೆ ಆಸೆಪಟ್ಟು ಅಧಿಕಾರಕ್ಕೆ ತಂದಿದ್ದಾರೆ. ಇಂದಿನ ಈ ಹೋರಾಟ ಸಾಂಕೇತಿಕ ಹೋರಾಟ ಮಾತ್ರ, ಜನ ಜಾಗೃತಿ ಮೂಡಿಸುವ ಜತೆಗೆ ಸಿಬಿಐಗೆ ವಹಿಸುವಂತೆ ಆಗ್ರಹಿಸುವ ಹೋರಾಟ ಮುಂದುವರೆಯಲಿದೆ" ಎಂದರು.
"ರಾಜ್ಯದ ಪರಿಸ್ಥಿತಿ ಈ ರೀತಿ ಅಧೋಗತಿಗೆ ಬಂತು. ದೇಶದ ಜನ ನಗುವಂತ ಪರಿಸ್ಥಿತಿ ಬಂತು ಎಂಬ ನೋವು ನಮಗಿದೆ. ಕಾಂಗ್ರೆಸ್ ರಕ್ತದಲ್ಲೇ ಭ್ರಷ್ಟಾಚಾರ, ಲೂಟಿ ಇದೆ. ರಾಜ್ಯದ ಜನರಿಗೆ ಅಪಮಾನ, ಅಭಿವೃದ್ಧಿಗೆ ಅನ್ಯಾಯ ಆಗುತ್ತಿದೆ. ಹೊಟೇಲ್ನಲ್ಲಿ ಊಟ ತಿಂಡಿಗೆ ರೇಟ್ ಲಿಸ್ಟ್ ಇರುತ್ತದೆ. ಇಡ್ಲಿಗೆ ದರ ಇರುತ್ತೆ. ಆದರೆ ಇವರ ಸರ್ಕಾರ ಮುಂದುವರೆದರೆ ಇಡ್ಲಿಗೆ ಬೇರೆ ಚಟ್ನಿ, ಸಾಂಬಾರ್ಗೂ ಬೇರೆ ಬೇರೆ ರೇಟ್ ಬರಲಿದೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಅಂಬಿಕಾಪತಿ ಕಾಂಗ್ರೆಸ್ ಪಕ್ಷದವರಲ್ಲ, ಅವರು ಜೆಡಿಎಸ್: ಐಟಿ ದಾಳಿ ಕುರಿತು ಸಚಿವ ಭೈರತಿ ಸುರೇಶ್ ಪ್ರತಿಕ್ರಿಯೆ