ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಒಡೆತನದ ಶಿಕ್ಷಣ ಸಂಸ್ಥೆ, ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನ್ಯಾಷನಲ್ ಎಜುಕೇಶನ್ ಫೌಂಡೇಶನ್ ಮೇಲೆ ಸಿಬಿಐ ಇಂದು ದಾಳಿ ನಡೆಸಿದೆ. ಈ ಸಂಸ್ಥೆಗೆ ಡಿ ಕೆ ಶಿವಕುಮಾರ್ ಅವರು ಅಧ್ಯಕ್ಷರಾಗಿದ್ದು, ಅವರ ಮಗಳು ಐಶ್ವರ್ಯ ಸಂಸ್ಥೆಯ ಕಾರ್ಯದರ್ಶಿಯಾಗಿದ್ದಾರೆ. ದಾಳಿ ನಡೆಸಿರುವ ಸಿಬಿಐ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಪರಿಶೀಲಿಸಿ, ಮಾಹಿತಿ ಪಡೆಯುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಅಧಿಕಾರಿಗಳು ನಿರಂತರವಾಗಿ ದಾಳಿ ನಡೆಸಿ ಮಾಹಿತಿ ಪಡೆದಿದ್ದಾರೆ.
ಬೆಳಗಾವಿಯಲ್ಲಿ ಈ ಸಂಬಂಧ ಸುದ್ದಿಗಾರರ ಜೊತೆ ಮಾತನಾಡಿರುವ ಅವರು ತಮ್ಮ ಮಾಲೀಕತ್ವದ ನ್ಯಾಷನಲ್ ಎಜುಕೇಶನ್ ಸಂಸ್ಥೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಮ್ಮ ಕುಟುಂಬಕ್ಕೆ ತನಿಖಾ ಸಂಸ್ಥೆಯಿಂದ ನಿರಂತರ ಕಿರುಕುಳ ಇದೆ. ಎಲ್ಲಾ ಹಂತಗಳಲ್ಲಿ ತನಿಖೆ ನಡೆದಿದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಹೀಗಾಗಿ ಭಯಪಡುವುದಿಲ್ಲ. ಕಾಂಗ್ರೆಸ್ನವರಿಗೆ ತೊಂದರೆ ಕೊಡಬೇಕೆಂದು ಹೀಗೆ ಮಾಡುತ್ತಿದ್ದಾರೆ. ನನ್ನ ಸಂಬಂಧಿಕರು, ವ್ಯಾವಹಾರಿಕ ಪಾಲುದಾರರಿಗೂ ನೊಟೀಸ್ ನೀಡಿ ಸಿಬಿಐ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ ಎಂದರು.
ಸಿಬಿಐನವರು ಏನು ಕಿರುಕುಳ ಕೊಡುತ್ತಾರೋ ಕೊಡಲಿ. ನಾನೇನು ತಪ್ಪು ಮಾಡಿಲ್ಲ. ಎಲ್ಲಾ ಲೀಗಲ್ ಆಗಿದೆ. ನಮ್ಮ ಮೇಲೆ ಉದ್ದೇಶಪೂರ್ವಕವಾಗಿ ತನಿಕಾ ಸಂಸ್ಥೆಗಳನ್ನು ಬಿಟ್ಟು ಕಿರುಕುಳ ನೀಡುವ ಕಾರ್ಯವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಿರುಕುಳಕ್ಕೆ ಕೊನೆಯಿಲ್ಲ. ನಾನು ಒಬ್ಬ ಹಿರಿಯ ವಕೀಲರಿಗೆ 5 ಲಕ್ಷ ರೂ. ಶುಲ್ಕ ನೀಡಿದ್ದೆ. ಅವರಿಗೂ ನೋಟಿಸ್ ನೀಡಿದ್ದಾರೆ. ನನ್ನ ಆಸ್ತಿಯ ಸಂಪೂರ್ಣ ವಿವರ ನೀಡಿದ್ದೇನೆ. ನನ್ನೊಬ್ಬನ ಮೇಲೆಯೇ ಇಷ್ಟು ತನಿಖಾ ಸಂಸ್ಥೆಗಳ ವಿಚಾರಣೆ ನಡೆಯುತ್ತಿದೆ. ಉದ್ದೇಶಪೂರ್ವಕ ಕಿರುಕುಳ ನೀಡಲಾಗುತ್ತಿದೆ. ನನ್ನೊಬ್ಬನ ಮೇಲೆ ಏಕೆ ತನಿಖೆ. ಸಾಕಷ್ಟು ಮಂದಿ ತಪ್ಪೆಸಗಿದ್ದಾರೆ. ಆದರೆ ಕಾಂಗ್ರೆಸ್ ನಾಯಕರನ್ನು ಕಿರುಕುಳಕ್ಕೆ ಒಳಪಡಿಸಲಾಗುತ್ತಿದೆ. ನಾನು ಎಲ್ಲ ಕಡೆಯಲ್ಲೂ ಕಾನೂನು ಪ್ರಕಾರವೇ ನಡೆದುಕೊಂಡಿದ್ದೇನೆ. ಎಲ್ಲಾ ದಾಖಲೆಗಳನ್ನೂ ನೀಡಿದ್ದೇನೆ. ನ್ಯಾಯಾಲಯ, ಭಗವಂತ, ಮಾಧ್ಯಮಗಳ ಮೇಲೆ ವಿಶ್ವಾಸವಿದೆ. ನ್ಯಾಯ ಸಿಗಲಿದೆ ಎಂಬ ನಂಬಿಕೆ ಇದೆ ಎಂದರು.
ಇಂದು ಸಿಬಿಐ ದಾಳಿ ನಮ್ಮ ಶಿಕ್ಷಣ ಸಂಸ್ಥೆ ಮೇಲೆ ನಡೆದಿದೆ ಎಂಬ ಮಾಹಿತಿ ನನಗೆ ಲಭಿಸಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ನಾನು ನಮ್ಮವರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ. ದಾಳಿ ನಡೆದಿರುವುದು ನಿಜ. ಹೆಚ್ಚಿನ ವಿವರ ಸಿಕ್ಕಿಲ್ಲ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮಾತನಾಡುತ್ತೇನೆ ಎಂದು ಹೇಳಿದರು.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮತ್ತೊಮ್ಮೆ ಇದು ಮುಂದುವರೆದಿದೆ. ನಾನು ಸಂಪೂರ್ಣ ದಾಖಲೆಯನ್ನು ಸಲ್ಲಿಸಿದ್ದೇನೆ. ನನ್ನ ಕಡೆಯಿಂದ ನೀಡಬೇಕಾದ ಎಲ್ಲ ಮಾಹಿತಿ ಒದಗಿಸಿದ್ದೇನೆ. ಅದಾಗಿಯೂ ಉದ್ದೇಶಪೂರ್ವಕವಾಗಿ ಪದೇಪದೇ ದಾಳಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿಬಿಐ ಅಕ್ರಮ ಆಸ್ತಿ ಸಂಪಾದನೆ ಕೇಸ್ ದಾಖಲಿಸಿದೆ.. ಇಡಿ ಯಾವ ಎಫ್ಐಆರ್ ಹಾಕಿದೆ ಗೊತ್ತಿಲ್ಲ: ಡಿಕೆಶಿ